ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕೃತಿ ಮನುಷ್ಯನಿಗಾಗಿಯೇ ನಿರ್ಮಾಣವಾಗಿದೆ. ನಮ್ಮಿಷ್ಟದಂತೆ ಬಳಸಿಕೊಳ್ಳಬಹುದು ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವು. ಆದರೆ ಇದು ತಪ್ಪು ಎಂದು ಮೂರು ದಶಕದ ಹಿಂದೆಯೇ ತಿಳಿಸಿಕೊಟ್ಟ ವಿಶ್ವ ದರ್ಜೆಯ ಶ್ರೇಷ್ಠ ಬರಹಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಂದು ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತಿನ ಹದಿನಾಲ್ಕು ಸಂಪುಟಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಕೃತಿಗಳ ಕುರಿತು ಅವರು ಮಾತನಾಡಿದರು.
ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ಪ್ರಕೃತಿಯು ಮನುಷ್ಯರಿಗಾಗಿಯೇ ಸೃಷ್ಟಿಯಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ಇದರಿಂದಾಗಿಯೇ ಪ್ರಕೃತಿಯ ವಿಪರೀತ ಬಳಕೆಯಿಂದಾಗಿ ಅವನತ್ತಿಯತ್ತ ಸಾಗುತ್ತಿದ್ದೇವೆ. ನಮ್ಮ ಬಳಕೆಗಾಗಿಯೇ ಪ್ರಕೃತಿ ಇದೆ ಎಂದು ಭಾವಿಸಿರುವುದು ತಪ್ಪು ನಂಬಿಕೆಯಾಗಿದೆ. ಇದರಿಂದ ವಿಶ್ವವೇ ಅವನತಿಯತ್ತ ತಲುಪಿದೆ ಎಂದು ವಿಷಾದಿಸಿದರು.ಕಾಡುಗಳನ್ನು ನಮ್ಮ ಸ್ವಾರ್ಥಕ್ಕಾಗಿ ನಾಶ ಮಾಡುತ್ತಿದ್ದೇವೆ. 30 ವರ್ಷಗಳ ಹಿಂದೆಯೇ ತೇಜಸ್ವಿ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಪ್ರಕೃತಿ ಸಂರಕ್ಷಣೆ ಬಗ್ಗೆ ಎಚ್ಚರಿಸಿದ್ದರು. ಅಹಂಕಾರವನ್ನು ಎಲ್ಲಿಯವರೆಗೂ ಮನುಕುಲ ತ್ಯಜಿಸುವುದಿಲ್ಲವೋ ಅಲ್ಲಿಯವರೆಗೂ ನಾವು ಅಪಾಯದಲ್ಲಿ ಇರುತ್ತೇವೆ ಎಂದು ಕಾಳಜಿಯಿಂದ ಹೇಳಿದ್ದರು. ಇದು ಈಗ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. ತೇಜಸ್ವಿ ಬರಹಗಳು ಇಂಗ್ಲಿಷ್ ಮಾತ್ರವಲ್ಲದೇ ವಿಶ್ವದ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕು ಎಂದು ಆಶಿಸಿದರು.
ಸಾಹಿತಿ ಹಂಪ ನಾಗರಾಜಯ್ಯ, ಕವಿ ಡಾ.ಕೆ.ಚಿದಾನಂದಗೌಡ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಲೇಖಕಿ ತಾರಿಣಿ ಚಿದಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದೇರ್ಶಕಿ ಡಾ.ಧರಣಿದೇವಿ ಮಾಲಗತ್ತಿ, ಕಾರವಾರ ಜಲಸಾರಿಗೆ ಆಯುಕ್ತ ಜಯರಾಮ್ ರಾಯ್‌ಪುರ ಮತ್ತಿತರರು ಉಪಸ್ಥಿತರಿದ್ದರು.ತೇಜಸ್ವಿ ಮತ್ತು ಸ್ಕೂಟರ್ ‘ಸವಾರಿ’ಯ ಸಂಕಷ್ಟ!
ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಸ್ಯ ಪ್ರಜ್ಞೆ ಹೊಂದಿದ್ದರು. ಎಂತಹ ಗಂಭೀರ ಸನ್ನಿವೇಶದಲ್ಲೂ ನವಿರಾದ ಹಾಸ್ಯದಿಂದ ಎಲ್ಲರಲ್ಲೂ ನಗೆ ಉಕ್ಕಿಸುತ್ತಿದ್ದರು. ಆದರೆ, ಅವರ ಜೊತೆಗಿನ ಸ್ಕೂಟರ್ ಪ್ರಯಾಣ ಮಾತ್ರ ಸಂಕಷ್ಟ ತರುತ್ತಿತ್ತು ಎಂದು ಅವರ ಒಡನಾಡಿಗಳು ಸ್ಮರಿಸಿದರು.ತೇಜಸ್ವಿ ಅವರೊಂದಿಗಿನ ತಮ್ಮ ಒಡನಾಟ ನೆನಪಿಸಿಕೊಂಡ ಹಲವು ಗೆಳೆಯರು, ತೇಜಸ್ವಿ ಅವರಿಗಿದ್ದ ಅಪಾರ ಹಾಸ್ಯಪ್ರಜ್ಞೆ, ಛಾಯಾಗ್ರಾಹಣ, ಹೃದಯ ವೈಶಾಲ್ಯವನ್ನು ಸ್ಮರಿಸಿದರು. ಅಷ್ಟೇ ಅಲ್ಲ, ತೇಜಸ್ವಿ ಅವರ ಹಿಂಬದಿಯ ಸೀಟ್ ಇಲ್ಲದ ಸ್ಕೂಟರ್‌ನಲ್ಲಿ ತೆರಳಿದ್ದರಿಂದ ಉಂಟಾದ ಸಂಕಷ್ಟ ಸನ್ನಿವೇಶವನ್ನೂ ವಿವರಿಸಿದರು.
ವ್ಯಂಗ್ಯಚಿತ್ರಕಾರ ಬಿ.ಜಿ.ಗುಜ್ಜಾರಪ್ಪ ಮಾತನಾಡಿ, ಮೂಡಿಗೆರೆಯಲ್ಲಿ ತೇಜಸ್ವಿ ಅವರ ಜೊತೆ ಮೀನು ಹಿಡಿಯಲು ಸ್ಕೂಟರ್‌ನಲ್ಲಿ ಕೆರೆಗೆ ತೆರಳಿದ್ದೆ. ಸ್ಕೂಟರ್‌ಗೆ ಹಿಂಬದಿಯ ಸೀಟ್ ಇರಲಿಲ್ಲ. ಗಾಳಕ್ಕೆ ಬೃಹತ್ ಗಾತ್ರದ ಆಮೆ ಬಿತ್ತು. ವಾಪಸ್ ಬರುವಾಗ ಸ್ಕೂಟರ್‌ನ ಹಿಂಬದಿ ಸೀಟ್‌ನಲ್ಲಿ ಕುಳಿತುಕೊಂಡಿದ್ದೆ. ಒಂದು ಕೈಯಲ್ಲಿ ಗಾಳ, ಇನ್ನೊಂದು ಕೈಯಲ್ಲಿ ಎರೆಹುಳದ ಬಾಟಲ್ ಹಿಡಿದಿದ್ದೆ. ಬಳಿಕ ತೇಜಸ್ವಿ ಅವರು ಆಮೆಯನ್ನು ನನ್ನ ತೊಡೆಯ ಮೇಲೆ ಇಟ್ಟಿದ್ದರು. ಆಗಿನ ನನ್ನ ಪರಿಸ್ಥಿತಿ ಏನೆಂದು ಹೇಳಲಿ ಎಂದು ನಗುತ್ತಾ ಪ್ರಶ್ನಿಸಿದರು.ಪಶು ಆಸ್ಪತ್ರೆಯಲ್ಲಿ ಮನುಷ್ಯರಿಗೆ ಚಿಕಿತ್ಸೆ!ಬಾಪು ದಿನೇಶ್ ಗೌಡ ಮಾತನಾಡಿ, ತೇಜಸ್ವಿ ಅವರ ಜೊತೆ ನಾನು ಮೀನು ಹಿಡಿಯಲು ಬಹಳಷ್ಟು ಬಾರಿ ಹೋಗಿದ್ದೇನೆ. ಸ್ಕೂಟರ್‌ನ ಹಿಂಬಾಗದ ಸೀಟ್ ಇಲ್ಲದಿದ್ದರಿಂದ ನನ್ನ ಮೂರ್ನಾಲ್ಕು ಪ್ಯಾಂಟ್ ಹರಿದಿವೆ. ಒಮ್ಮೆ ಸ್ಕೂಟರ್‌ನಲ್ಲಿ ಹೋಗುವಾಗ ಬಿದ್ದಿದ್ದರಿಂದ ನನ್ನ ಕೈಯಲ್ಲಿ ರಕ್ತಸ್ರಾವವಾಯಿತು. ಆಗ ನನ್ನನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಇದೇನ್ಸಾರ್ ಎಂದರೆ, ‘ಮನುಷ್ಯರು-ಪಶುಗಳು ಎರಡೂ ಒಂದೇ’ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡರು.