ಪರಶಿವಮೂರ್ತಿ ಮಾಟಲದಿನ್ನಿ
ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಮಣ್ಣಿನ ಮತ್ತು ಪಿಒಪಿ ಎತ್ತುಗಳ ಮಾರಾಟ ಜೋರಾಗಿದೆ. ಒಂದೆಡೆ ದಿನಗಟ್ಟಲೆ ಶ್ರಮಪಟ್ಟು ಮಣ್ಣಿನ ಎತ್ತುಗಳನ್ನು ತಯಾರಿಸಿದ ಕುಂಬಾರರು ಗ್ರಾಹಕರಿಗಾಗಿ ಕಾದು ಕುಳಿತಿದ್ದರೆ, ಮತ್ತೊಂದೆಡೆ ಬಣ್ಣಬಣ್ಣದ, ಹೊಳಪಿನ ಪಿಒಪಿ ಎತ್ತುಗಳು ಖರೀದಿದಾರರ ಗಮನ ಸೆಳೆಯುತ್ತಿವೆ.
ಪಿಒಪಿಗೇ ಜನರ ಒಲವು: ಮಣ್ಣಿನ ಎತ್ತುಗಳ ಒಂದು ಜೋಡಿಗೆ ಕೇವಲ ₹50 ದರವಿದ್ದರೆ, ಪಿಒಪಿ ಎತ್ತುಗಳ ಜೋಡಿಗೆ ₹200ರಿಂದ ₹300ರ ವರೆಗೆ ಬೆಲೆ ಇದೆ. ಬೆಲೆಯಲ್ಲಿ ನಾಲ್ಕು ಪಟ್ಟು ವ್ಯತ್ಯಾಸವಿದ್ದರೂ ಗ್ರಾಹಕರು ಪಿಒಪಿ ಎತ್ತುಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆಕರ್ಷಕ ಬಣ್ಣ, ಹೊಳಪು, ವಿವಿಧ ವಿನ್ಯಾಸಗಳು ಹಾಗೂ ವರ್ಷಗಳ ವರೆಗೆ ಉಳಿಸಿಕೊಳ್ಳಬಹುದಾದ ಗುಣವೇ ಪಿಒಪಿ ಎತ್ತುಗಳ ಜನಪ್ರಿಯತೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.ಇತಿಹಾಸದ ಪುಟಕ್ಕೆ ಮಣ್ಣೆತ್ತು!: ಮಣ್ಣೆತ್ತಿನ ಅಮಾವಾಸ್ಯೆ ಎಂಬ ಹೆಸರಿನಲ್ಲೇ ಮಣ್ಣಿನ ಮಹತ್ವ ಅಡಗಿದೆ. ಆದರೆ ಮಣ್ಣಿನ ಎತ್ತುಗಳೇ ಕಣ್ಮರೆಯಾಗುತ್ತಿರುವುದು ಈ ಹಬ್ಬದ ಮೂಲ ಆಶಯವನ್ನೇ ಮರೆಸುವಂತೆ ಮಾಡುತ್ತಿದೆ. ಸ್ಥಳೀಯ ಕುಂಬಾರರ ಕೈಚಳಕಕ್ಕೆ ಪ್ರೋತ್ಸಾಹ ನೀಡುವುದು, ಪರಿಸರಸ್ನೇಹಿ ಮಣ್ಣಿನ ಎತ್ತುಗಳನ್ನು ಖರೀದಿಸುವುದು ಹಾಗೂ ಮಕ್ಕಳಲ್ಲಿ ಈ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಇಲ್ಲವಾದರೆ ಮುಂದಿನ ಪೀಳಿಗೆಗೆ ಮಣ್ಣೆತ್ತಿನ ಅಮಾವಾಸ್ಯೆ ಎಂಬ ಹೆಸರು ಮಾತ್ರ ಉಳಿದು, ಮಣ್ಣಿನ ಎತ್ತುಗಳು ಹಾಗೂ ಅವುಗಳನ್ನು ರೂಪಿಸುವ ಕುಂಬಾರರ ಕಲೆ ಇತಿಹಾಸದ ಪುಟಗಳಿಗೆ ಸೇರಿಬಿಡುವ ಅಪಾಯ ಎದುರಾಗಿದೆ.
ಪ್ರೋತ್ಸಾಹ ನೀಡಬೇಕು: ಮಣ್ಣೆತ್ತಿನ ಅಮಾವಾಸ್ಯೆ ನಮ್ಮ ಕೃಷಿ ಸಂಸ್ಕೃತಿ ಮತ್ತು ಪರಿಸರ ಜಾಗೃತಿಯ ಸಂಕೇತವಾಗಿದೆ. ಪಿಒಪಿ ಎತ್ತುಗಳ ಬಳಕೆಯಿಂದ ಸ್ಥಳೀಯ ಕುಂಬಾರರ ಬದುಕಿಗೆ ಹೊಡೆತ ಬೀಳುವ ಜತೆಗೆ ಪರಿಸರಕ್ಕೂ ಹಾನಿಯಾಗುತ್ತದೆ. ಸಂಪ್ರದಾಯ ಉಳಿಯಬೇಕಾದರೆ ಜನರು ಪರಿಸರಸ್ನೇಹಿ ಮಣ್ಣಿನ ಎತ್ತುಗಳನ್ನು ಖರೀದಿಸಿ ಸ್ಥಳೀಯ ಕುಂಬಾರರ ಕೈಚಳಕಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಕುಷ್ಟಗಿಯ ಶಾರದಾ ಶೆಟ್ಟರ್ ಹೇಳಿದರು.