ಕನ್ನಡಪ್ರಭ ವಾರ್ತೆ ಪುತ್ತೂರು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜನಸಂಖ್ಯಾ ಸ್ಫೋಟ ತಡೆಗಟ್ಟಲು ಸಾಧ್ಯವಿದೆ. ಜನ ಸಂಖ್ಯೆ ಬೆಳೆಯುತ್ತಾ ಹೋದಂತೆ ಮೂಲ ಸೌಕರ್ಯ ಹೊಂದಾಣಿಕೆ ಕಷ್ಟಕರವಾಗಿದೆ. ಇದರಿಂದಾಗಿ ಜನರ ಆವಶ್ಯಕತೆಗಳನ್ನು ಪೂರೈಸುವಲ್ಲಿ ದೇಶ ಹಿಂದೆ ಬೀಳುತ್ತದೆ. ಜನಸಂಖ್ಯೆ ಹೆಚ್ಚಾದಂತೆ ಬಡತನ ಹೆಚ್ಚಾಗುವುದರ ಜೊತೆಗೆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.ದ.ಕ. ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಹಯೋಗದಲ್ಲಿ ಸೋಮವಾರ ಪುತ್ತೂರಿನ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚೈನಾ ದೇಶ ಹೊರತುಪಡಿಸಿದರೆ ಭಾರತ ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ವೈದ್ಯಕೀಯ ವಿಭಾಗ ವೇಗವಾಗಿ ಮುಂದುವರಿಯುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ನಿಧನರಾಗುವವರ ಅನುಪಾತ ಇಳಿಕೆಯಾಗಿದ್ದು, ಜನರ ಬದುಕುವ ಅನುಪಾತ ಹೆಚ್ಚಾಗಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಮೂಲಭೂತ ಸೌಕರ್ಯ ಒದಗಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯ ಬೇಕಾಗಿದೆ ಎಂದರು. ನಗರ ಸಭಾ ಪೌರಾಯಕ್ತ ಮಧು ಎಸ್ ಮನೋಹರ್ ಮಾತನಾಡಿ, ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಸಂಖ್ಯಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಿಶಿರ ಎಂ. ಪಿ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು’ ಕುರಿತು ಮಾಹಿತಿ ನೀಡಿದರು. ಬ್ರೈಟ್ ಪ್ಯಾರಮೆಡಿಕಲ್ ಕಾಲೇಜ್ ಸಂಚಾಲಕ ಮಹಮ್ಮದ್ ಸಲೀಂ ಹಾಜರಿದ್ದರು.ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ವಿದ್ಯಾ, ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ, ಆಶಾ ಕಾರ್ಯಕರ್ತೆಯರಾದ ತಿಂಗಳಾಡಿಯ ಕಲಾವತಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಮಿತ್ರಾ ಹಾಗೂ ಕುಟುಂಬ ಕಲ್ಯಾಣ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಶ್ಮಿತಾ ಪ್ರಭು ಅವರನ್ನು ಗೌರವಿಸಲಾಯಿತು.ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿದರು. ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮೀ ಎಂ. ವಂದಿಸಿದರು. ತಾಲೂಕು ಟಿ.ಬಿ. ಚಿಕಿತ್ಸಾ ಮೇಲ್ವಿಚಾರಕ ರವಿ ಸುವರ್ಣ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ರವಿಶಂಕರ್ ಸಹಕರಿಸಿದರು.