ಕನ್ನಡಪ್ರಭ ವಾರ್ತೆ ಬೆಳಗಾವಿ
ಸದೃಢ ಸಮಾಜ, ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಪೋಷಣ್ ಅಭಿಯಾನ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.ಬೆಳಗಾವಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಮಾಸಾಚರಣೆ- 2025 ರ ಅಂಗನವಾಡಿ ಅನ್ನಪ್ರಾಶನ, ಅಕ್ಷರ ಅಭ್ಯಾಸ, ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮತ್ತು ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ವಾಹನಗಳ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.ಪೋಷಣ್ ಅಭಿಯಾನವನ್ನು ಈ ತಿಂಗಳು ಪೂರ್ತಿ ಪ್ರತಿ ಜಿಲ್ಲೆಯಲ್ಲೂ ಮಾಡಲಾಗುವುದು ಎಂದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಇಂಥ ಯೋಜನೆಯನ್ನು ಜಾರಿಗೆ ತರುವ ಅದೃಷ್ಟ ನನಗೆ ಒಲಿಯಿತು. ವಾರ್ಷಿಕ ₹30 ಸಾವಿರ ಕೋಟಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತರೆ ಕಾರಣ. ಸ್ವತಃ ಮುಖ್ಯಮಂತ್ರಿಗಳೇ ಎಷ್ಟೋ ಬಾರಿ ನನ್ನ ಬಳಿ ಇದನ್ನು ಹೇಳಿದ್ದಾರೆ ಎಂದರು.ನಾನು ಇಲಾಖೆಯ ಸಚಿವೆಯಾಗಿ ಬರುವುದಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಆಯ್ಕೆ ವೇಳೆ ವಿಧವೆಯರಿಗೆ ಕೇವಲ ಶೇ.5 ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದೀಗ ವಿಧವೆಯರಿಗೆ ಯಾವುದೇ ನಿರ್ಬಂಧ ಇಲ್ಲದೇ ನೇರ ನೇಮಕಾತಿಗೆ ಅವಕಾಶ ನೀಡಲಾಗಿದೆ. ನೊಂದ ಮಹಿಳೆಯರಿಗೆ ಅನುಕೂಲ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವೆ ಎಂದು ವಿವರಿಸಿದರು.ಇಲಾಖೆಯ ನೌಕರರ ಮೇಲೆ ದೌರ್ಜನ್ಯವಾದರೆ ನನಗೆ ನೇರವಾಗಿ ಫೋನ್ ಮಾಡಿ, ದೂರಬಹುದು. ದೌರ್ಜನ್ಯ ಎಂಬುದನ್ನು ಇಲಾಖೆಯಿಂದ ಬೇರು ಸಮೇತ ಕಿತ್ತು ಹಾಕೋಣ. ವೃತ್ತಿ ಹಾಗೂ ವೈಯಕ್ತಿಕ ಕಷ್ಟದಲ್ಲೂ ನಿಮ್ಮ ಜೊತೆ ಇರುತ್ತೇನೆ. ಇದರ ಜೊತೆಗೆ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಗೆ ನಮ್ಮ ಇಲಾಖೆಯಿಂದ ₹25 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದರು.ಇಲಾಖೆಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೌಕರರಿಗೆ ಬಡ್ತಿ ಕೂಡ ನೀಡಲಾಗಿದೆ. ಮೇಲ್ವಿಚಾರಕರ ಹುದ್ದೆಯಿಂದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಎಸಿಡಿಪಿಒ) ಹುದ್ದೆಗೆ ಬಡ್ತಿ ನೀಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದು, ಅದಷ್ಟು ಬೇಗ ಇದರ ಪ್ರಕ್ರಿಯೆ ನಡೆಯಲಿದೆ ಎಂದರು.ಮೊಮ್ಮಗನ ನಾಮಕರಣ ಸಮಾರಂಭಕ್ಕೆ ಆಹ್ವಾನ:
ಮುಂದಿನ ತಿಂಗಳು ನಡೆಯಲಿರುವ ನನ್ನ ಮೊಮ್ಮಗನ ನಾಮಕರಣಕ್ಕೆ ಎಲ್ಲರೂ ತಪ್ಪದೇ ಬರಬೇಕು ಎಂದು ಸಚಿವರು ಸಮಾರಂಭದಲ್ಲಿ ಹಾಜರಿದ್ದವರಿಗೆಲ್ಲ ಆಹ್ವಾನ ನೀಡಿದರು. ನಿಮ್ಮ ಸಹೋದರಿಯಾಗಿ ನನ್ನ ಮೊಮ್ಮಗನ ನಾಮಕರಣಕ್ಕೆ ಎಲ್ಲರನ್ನೂ ಆಹ್ವಾನಿಸುತ್ತೇನೆ. ಎಲ್ಲರೂ ತಪ್ಪದೇ ಆಗಮಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮುಕ್ತ ಆಹ್ವಾನ ನೀಡಿದರು.ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಇದರಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪಾತ್ರ ಬಹಳ ದೊಡ್ಡದು. ಸಚಿವರು ಕೇವಲ ಆದೇಶ ಮಾಡದೆ, ಕೇಂದ್ರ ಸರ್ಕಾರದ ಮನವೊಲಿಸಿ ಸುಮಾರು 17 ಸಾವಿರ ಸಕ್ಷಮ್ ಅಂಗನವಾಡಿ ಕೇಂದ್ರಗಳಿಗೆ ಅನುದಾನ ತಂದರು. ಕೇಂದ್ರದಿಂದ ಶೇ.50 ರಷ್ಟು ಅನುದಾನ, ಜೊತೆಗೆ ಕರ್ನಾಟಕ ಸರ್ಕಾರ ಕೂಡ ಉಳಿದ ಶೇ.50ರಷ್ಟು ಅನುದಾನ ನೀಡಿದೆ. ಪ್ರತಿಯೊಂದು ಹಂತದಲ್ಲೂ ಇಲಾಖೆಯ ಕೆಲಸಗಳನ್ನು ಸಚಿವರು ಉತ್ತಮವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಇಲಾಖೆಯ ಉಪ ನಿರ್ದೇಶಕ ಚೇತನಕುಮಾರ್ ಎಂ.ಎನ್, ಇಲಾಖೆಯ ನಿರೂಪಣಾಕಾಧಿಕಾರಿ ಅನಿಲ್ ಕುಮಾರ ಹೆಗಡೆ, ಸಿಡಿಪಿಒ ಪರ್ವಿನ್ ಕೌಸರ್, ಮಹಿಳಾ ಕಲ್ಯಾಣ ಅಧಿಕಾರಿ ಕಾಂಚನಾ ಅಮರೆ, ನಾಮದೇವ ಬಿಲ್ಕರ್, ತಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ತಾಲೂಕಿನ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಾಲವಿಕಾಸ ಸಲಹಾ ಸದಸ್ಯರು, ಅಂಗನವಾಡಿಯ ಕಾರ್ಯಕರ್ತೆಯರು, ಸಹಾಯಕಿಯರು, ವಿಕಲಚೇತನ ಫಲಾನುಭವಿಗಳುಮಾಜಿ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಗರ್ಭಿಣಿಯರು ಉಪಸ್ಥಿತರಿದ್ದರು.