ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶೀಘ್ರ ಮೆಟ್ರೋ ಆರಂಭ ಸಾಧ್ಯತೆ

KannadaprabhaNewsNetwork |  
Published : Aug 22, 2026, 03:45 AM ISTUpdated : Aug 22, 2026, 05:19 AM IST
Namma Metro

ಸಾರಾಂಶ

ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದ ಪ್ರಯಾಣಿಕರಿಗೆ ಶೀಘ್ರ ಸಿಹಿ ಸುದ್ದಿ ನೀಡಲು ನಮ್ಮ ಮೆಟ್ರೋ ಶ್ರಮಿಸುತ್ತಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಂಡರೆ ಮುಂದಿನ ವರ್ಷದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ.

 ಬೆಂಗಳೂರು : ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದ ಪ್ರಯಾಣಿಕರಿಗೆ ಶೀಘ್ರ ಸಿಹಿ ಸುದ್ದಿ ನೀಡಲು ನಮ್ಮ ಮೆಟ್ರೋ ಶ್ರಮಿಸುತ್ತಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಂಡರೆ ಮುಂದಿನ ವರ್ಷದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ.

ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಟ್ರೊ ನಡುವೆ ಬ್ಲೂ ಲೇನ್ ಮಾರ್ಗದ ನಿರ್ಮಾಣ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರದ ಜೊತೆ ಮೆಟ್ರೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಸುಮಾರು ಒಂದೂವರೆ ಗಂಟೆ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಕಾಮಗಾರಿ ವಿಳಂಬವಾಗಲು ಕಾರಣಗಳು, ಪರಿಹಾರಗಳನ್ನು ಚರ್ಚಿಸಿ ಕೆಳ ಹಂತದ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ಎಂಜಿ ರಸ್ತೆಯಿಂದ ವಿಮಾನನಿಲ್ದಾಣಕ್ಕೆ ಕೇವಲ 45 ನಿಮಿಷ

ಏರ್‌ಪೋರ್ಟ್ ಮಾರ್ಗ ಉದ್ಘಾಟನೆಯಾದರೆ, ಎಂಜಿ ರಸ್ತೆಯಿಂದ ವಿಮಾನನಿಲ್ದಾಣಕ್ಕೆ ಕೇವಲ 45 ನಿಮಿಷದ ಪ್ರಯಾಣ. ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್.ಎಸ್.ಆರ್ ಲೇ ಔಟ್, ಮಾರತಹಳ್ಳಿ, ಇಬ್ಬಲೂರು ಕೆ.ಆರ್.ಪುರಂ, ನಾಗವಾರ, ಹೆಬ್ಬಾಳ ನಂತರ ಏರ್ ಪೋರ್ಟ್ ಮಾರ್ಗಗಳಿಗಾಗಿ ಎರಡು ಹಂತದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಒಳ‍ಭಾಗದಲ್ಲಿ (ಕಾರ್ಗೋ ಬಳಿ ಒಂದು, ಟರ್ಮಿನಲ್ 2ಬಳಿ ಮತ್ತೊಂದು ನಿಲ್ದಾಣ) ಎರಡು ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ.

ಇವುಗಳಿಗೆ ಸಿಸಿಟಿವಿ ಅಳವಡಿಕೆ, ನಿರ್ವಹಣೆ, ಚೆಕ್ ಇನ್, ಚೆಕ್ ಔಟ್ ಕೆಲಸಗಳಿಗೆ ಬೇಕಾದ ಎಲ್ಲಾ ಕಟ್ಟಡಗಳ ನಿರ್ಮಾಣ ಜವಾಬ್ದಾರಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆ ವಹಿಸಿಕೊಂಡಿದೆ. ಇವುಗಳಿಗೆ ಹಳಿ ನಿರ್ಮಾಣ, ಸಿಗ್ನಲ್, ಕಮ್ಯುನಿಕೇಷನ್ ಕೆಲಸ ಮಾತ್ರ ಮೆಟ್ರೋ ಜವಾಬ್ದಾರಿಯಾಗಿದೆ. ವಿಮಾನ ನಿಲ್ದಾಣದ ಹೊರಗಿನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಸೇರಿದಂತೆ ಎಲ್ಲಾ ಕೆಲಸ ಮೆಟ್ರೋ ವಹಿಸಿಕೊಂಡಿದೆ. ಈ ಎಲ್ಲಾ ಕಾಮಗಾರಿಗಳಿಗೆ ಅಗತ್ಯವಿರುವ ಉಪಕರಣ ಪೂರೈಸಿ, ತ್ವರಿತವಾಗಿ ಕಾಮಗಾರಿ ಮುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ಜಾಫರ್ ಕನ್ನಡಪ್ರಭಕ್ಕೆ ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ಹಾಗೂ ಅವರ ಅಧಿಕಾರಿಗಳ ತಂಡ ಹಾಗೂ ಮೆಟ್ರೋ ಸಂಸ್ಥೆಯ ಅಧಿಕಾರಿಗಳ ತಂಡ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಈ ಸಭೆ ಮಹತ್ವವಾಗಿದ್ದು, ಕೆಳಹಂತದಲ್ಲಿ ಇಂತಹ ಸಾಮಾನ್ಯ ವಿಷಯಗಳ ಕುರಿತು ಸಮಸ್ಯೆಯಾದರೂ ಹಿರಿಯ ಅಧಿಕಾರಿಗಳ ಹಂತದಲ್ಲಿ ತಕ್ಷಣ ಬಗೆಹರಿಸಲು ಸುಲಭವಾಗಿದೆ ಎನ್ನಲಾಗಿದೆ.

ಮೂರು ತಿಂಗಳ ಗಡುವು:

ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಮೂರು ತಿಂಗಳ ಒಳಗೆ ಕಾಮಗಾರಿ ಮುಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಇಬ್ಬರು ವ್ಯವಸ್ಥಾಪಕ ನಿರ್ದೇಶಕರು ಸಭೆ ಸೇರಿ ಈ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಪ್ರಗತಿ ಪರಿಶೀಲಿಸುತ್ತೇವೆ. ಅಂದುಕೊಂಡಂತೆ ಎಲ್ಲಾ ಮುಗಿದರೆ ಮುಂದಿನ ವರ್ಷ ಟ್ರಯಲ್ ಆರಂಭಿಸಬಹುದು ಎಂದು ಎಂಡಿ ಜಾಫರ್ ತಿಳಿಸಿದರು.

ಈಗ ಪ್ರಮುಖವಾಗಿ ಯಲಹಂಕ ರೈಲ್ವೆ ಕ್ರಾಸಿಂಗ್ ಸೇರಿ ಎರಡು ಸ್ಥಳಗಳಲ್ಲಿ ಕಾಮಗಾರಿ ನಡೆಯಬೇಕು. ಕೆ.ಆರ್.ಪುರಂ ಮತ್ತು ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಿವಿಲ್ ಕೆಲಸ ಮುಗಿದಿದೆ. ಕೆ.ಆರ್.ಪುರಂ ಹಾಗೂ ಹೆಬ್ಬಾಳ ಮಧ್ಯೆ, ಟ್ರಾಫಿಕ್ ಸಮಸ್ಯೆ ಹೆಚ್ಚಿರುವುದರಿಂದ ಇಲ್ಲಿ ಸ್ವಲ್ಪ ಕಾಮಗಾರಿ ವಿಳಂಬವಾಗುತ್ತಿದೆ ಎಂದು ತಿಳಿಸಿದರು. ಏರ್ ಪೋರ್ಟ್ ಮಾರ್ಗ (ಬ್ಲೂ ಲೇನ್) ಹಾಗೂ (ಪಿಂಕ್ ಲೇನ್) ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗದ ನಡುವೆ ಸಂಚಾರ ಆರಂಭವಾದರೆ ಎಂಜಿ ರಸ್ತೆಯಿಂದ ಏರ್ ಪೋರ್ಟ್ ಗೆ ಹೋಗುವುದು ಸುಲಭವಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದೇವಸ್ಥಾನ ನಿರ್ಮಾಣದ 2ನೇ ಹಂತದ ಕಾಮಗಾರಿಗೆ ಲಕ್ಷ್ಮೀ ಚೆಕ್ ಹಸ್ತಾಂತರ
ಭೀಕರ ಹತ್ಯೆ ಖಂಡಿಸಿ ಪ್ರತಿಭಟನೆ