ಸಿಯುಕೆಯಲ್ಲಿ ದೃಶ್ಯ ಕಲೆ ಸ್ನಾತಕೋತ್ತರ ಕೋರ್ಸ್‌: ಪ್ರೊ. ಬಟ್ಟು ಸತ್ಯನಾರಾಯಣ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ವರ್ಷದಿಂದ ಮಾಸ್ಟರ್ ಆಫ್ ವಿಜುವಲ್ ಆರ್ಟ್ಸ್‌ (ಎಂವಿಎ) ಕೊರ್ಸ್ ಆರಂಭ.

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮುಂಬರುವ 2024-25ನೇ ಶೈಕ್ಷಣಿಕ ವರ್ಷದಿಂದ ಮಾಸ್ಟರ್ ಆಫ್ ವಿಜುವಲ್ ಆರ್ಟ್ಸ್‌ (ಎಂವಿಎ) ಕೊರ್ಸ್ ಆರಂಭಕ್ಕೆ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ನಿರ್ಧರಿಸಿ, ಪ್ರಕಟಸಿರುವುದು ಈ ಭಾಗದ ಸ್ನಾತಕೋತ್ತರ ಕಲಿಕೆ ಆಸಕ್ತರಿಗೆ ಅನುಕೂಲವಾಗಿದೆ ಎಂದು ಕಲಾವಿದರು ಹರ್ಷವ್ಯಕ್ತಪಡಿಸಿದ್ದಾರೆ.

ಈ ಪ್ರಯುಕ್ತ ಕಲಬುರಗಿಯ ಚೈತನ್ಯ ಆರ್ಟ್ ಗ್ಯಾಲರಿಯ ಸಂಸ್ಥಾಪಕ ಹಾಗೂ ಖ್ಯಾತ ಕಲಾವಿದರಾದ ಡಾ. ಎ.ಎಸ್. ಪಾಟಿಲ್, ಕಲಾವಿದರಾದ ಡಾ.ವಿ.ಬಿ ಬಿರಾದಾರ, ದಿ ಆರ್ಟ್ ಇಂಟಿಗ್ರೇಶನ್‌ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪತ್ರಜಾತ ಬೆಳಮಗಿ, ಡಾ. ಪರಸುರಾಮ ಅವರು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಈ ವೇಳೆ ಸಿಯುಕೆಯ ಕಲಾ ನಿಕಾಯದ ಡೀನ್‌ರಾದ ಪ್ರೊ. ವಿಕ್ರಮ ವಿಸಾಜಿ, ಸಂಗೀತ ಮತ್ತು ಲಲಿತ ಕಲಾ ವಿಭಾಗದ ಮುಖ್ಯಸ್ಥರಾದ ಡಾ. ಶಿವಾನಂದ ಬಂಟನೂರ ಇದ್ದರು.

ಕುಲಪತಿಗಳನ್ನು ಉದ್ಧೇಶಿಸಿ ಮಾತನಾಡಿದ ಡಾ.ಎ.ಎಸ್.ಪಾಟಟೀಲರು ಕಲಬುರಗಿಗೆ ಕಲೆಯಲ್ಲಿ ವಿಶೇಷ ಸ್ಥಾನವಿದೆ. ಎಸ್ ಎಂ.ಪಂಡಿತರಂತಹ ಮಹಾನ ಕಲಾ ತಪಸ್ವಿಗಳನ್ನು ಈ ನಾಡು ನೀಡಿದೆ. ಈ ಭಾಗದಲ್ಲಿ ಅನೇಕ ಕಲಾ ಮಹಾವಿದ್ಯಾಲಯಗಳು ಮತ್ತು ಕಲಾ ಪ್ರೇಮಿಗಳು ಇದ್ದಾರೆ. ಇಂತಹ ಒಂದು ಪ್ರದೇಶದಲ್ಲಿ ತಾವು ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಿರುವುದು ಅತಿ ಹೆಮ್ಮೆಯ ಕೆಲಸವಾಗಿದೆ. ಅದಕ್ಕೆ ತಮಗೆ ಹೃತ್ಪೂರ್ವಕ ಅಭಿನಂದನೆ ಎಂದು ಹೇಳಿದರು.

ಇದೇ ವೇಳೆ ಕುಲಪತಿಗಳಿಗೆ ಡಾ.ಎಸ್ ಪಂಡಿತರ ಕಲಾಕೃತಿಗಳ ಕುರಿತ ಪುಸ್ತಕ ನೀಡಲಾಯಿತು. ಅದನ್ನು ನೋಡಿ ಕುಲಪತಿಗಳು ಆಶ್ಚರ್ಯ ಚಕಿತರಾದ್ದರು. ತದನಂತರ ಮಾತನಾಡಿ, ನಮ್ಮ ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಕಲೆಗೆ ವಿಶೇಷ ಸ್ಥಾನವಿದೆ. ಇಂತಹ ಮಹಾನ ಪಂಡಿತರ ಕೊಡುಗೆ ಅನನ್ಯವಾಗಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಕಲಾ ಗ್ಯಾಲರಿ ಸ್ಥಾಪಿಸಲು ನಿರ್ಧರಿಸಲಾಗಿದೆ ಮತ್ತು ಸಂಗೀತ ಮತ್ತು ಲಲಿತ ಕಲಾ ವಿಭಾಗಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

Share this article