ಸ್ವಂತ ಜಾಗ ಇದ್ದರೂ ಬಾಡಿಗೆ ಕಟ್ಟಡದಲ್ಲೇ ಅಂಚೆ ಕಚೇರಿ

KannadaprabhaNewsNetwork |  
Published : Jul 24, 2026, 01:30 AM IST
ಮುಂಡರಗಿ ಪಟ್ಟಣದಲ್ಲಿ ಅಂಚೆ ಕಚೇರಿ ನಿರ್ಮಾಣಕ್ಕಾಗಿ ಖರೀದಿಸಿದ ಜಮೀನು. | Kannada Prabha

ಸಾರಾಂಶ

ಸದ್ಯ ಗದಗ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಯು ನೆಲಮಹಡಿಯಲ್ಲಿದೆ. ಇದರಿಂದ ಹಿರಿಯ ನಾಗರಿಕರು, ಅಂಗವಿಕಲರು ಮೆಟ್ಟಿಲು ಇಳಿಯಲು, ಹತ್ತಲು ತೊಂದರೆಯಾಗುತ್ತಿದೆ.

ಶರಣು ಸೊಲಗಿಮುಂಡರಗಿ: ಪಟ್ಟಣದ ತಾಲೂಕು ಅಂಚೆ ಕಚೇರಿ ನಿರ್ಮಾಣಕ್ಕಾಗಿ ಮುಂಡರಗಿ- ಗದಗ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆಯೇ 2 ಗುಂಟೆ ಜಾಗವನ್ನು ಖರೀದಿಸಲಾಗಿದೆ. ಆದರೆ ಇಲ್ಲಿಯವರೆಗೂ ನೂತನ ಕಟ್ಟಡ ಮಾತ್ರ ನಿರ್ಮಾಣವಾಗಿಲ್ಲ. ಸ್ವಂತ ಜಾಗ ಇದ್ದರೂ ಬಾಡಿಗೆ ಕಟ್ಟಡದಲ್ಲಿಯೇ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಅನೇಕ ಕಡೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಸ್ವಂತ ಜಾಗದ ಕೊರತೆ ಇರುತ್ತದೆ. ಜಾಗ ಇದ್ದರೆ ಅನುದಾನದ ಕೊರತೆಯಿರುತ್ತದೆ. ಹೀಗೆ ಅನೇಕ ಕಾರಣಗಳಿಂದ ಬಂದ ಯೋಜನೆಗಳು ಮರಳಿ ಹೋದ ಉದಾಹರಣೆಗಳು ಸಾಕಷ್ಟಿವೆ. ಆದರೆ ಇಲ್ಲಿನ ಅಂಚೆ ಕಚೇರಿಯ ಸ್ವಂತ ಕಟ್ಟಡಕ್ಕಾಗಿ ಜಾಗ ಇದ್ದರೂ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಅಂಚೆ ಕಚೇರಿಗಾಗಿ ಕಾಯ್ದಿರಿಸಿದ ಸ್ವಂತ ಜಾಗ ಜಾಲಿ ಕಂಟಿಗಳು ಸೇರಿದಂತೆ ವಿವಿಧ ಕಸ, ಕಡ್ಡಿಗಳಿಂದ ತುಂಬಿ ತುಳುಕುತ್ತಿದೆ.ಸದ್ಯ ಗದಗ ರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿಯು ನೆಲಮಹಡಿಯಲ್ಲಿದೆ. ಇದರಿಂದ ಹಿರಿಯ ನಾಗರಿಕರು, ಅಂಗವಿಕಲರು ಮೆಟ್ಟಿಲು ಇಳಿಯಲು, ಹತ್ತಲು ತೊಂದರೆಯಾಗುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅನೇಕ ಬಾರಿ ಇಲ್ಲಿನ ವಿವಿಧ ಸಂಘ ಸಂಸ್ಥೆಗಳು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಈ ಭಾಗದಲ್ಲಿನ ಸಂಸದರ ನಿಷ್ಕಾಳಜಿಯೂ ಕಾರಣವಾಗಿದೆ.

ಅಂಚೆ ಇಲಾಖೆಯ ಅಧಿಕಾರಿಗಳು ಕೂಡಲೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಬೇಕೆನ್ನುವುದು ಪಟ್ಟಣದ ನಾಗರಿಕರ ಒತ್ತಾಯವಾಗಿದೆ. ಸಂಸದರು ಹಾಗೂ ಇಲಾಖೆ ಅಧಿಕಾರಿಗಳು ಯಾವ ಕ್ರಮ ಕೈಗೊ‍ಳ್ಳುವರೋ ಕಾದು ನೋಡಬೇಕಿದೆ.

ನಿರ್ಮಾಣ ಭಾಗ್ಯ: ಅಂಚೆ ಕಚೇರಿ ಸ್ವಂತ ಕಟ್ಟಡಕ್ಕಾಗಿ ಅನೇಕ ವರ್ಷಗಳ ಹಿಂದೆಯೇ ಜಮೀನು ಖರೀದಿಸಿದರೂ ಕಟ್ಟಡ ನಿರ್ಮಾಣ ಭಾಗ್ಯ ದೊರೆಯದೇ ಬಾಡಿಗೆ ಕಚೇರಿಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ. ಸಂಸದ ಬಸವರಾಜ ಬೊಮ್ಮಾಯಿಯವರು ಮುತುವರ್ಜಿ ವಹಿಸಿ ತಕ್ಷಣವೇ ಅಂಚೆ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಧ್ರುವಕುಮಾರ ಹೂಗಾರ ತಿಳಿಸಿದರು.

ಅನುದಾನ ಬಿಡುಗಡೆ ಬಾಕಿ: ಮುಂಡರಗಿಯ ಅಂಚೆ ಕಚೇರಿ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಅನುದಾನ ಬಿಡುಗಡೆ ಮಾತ್ರ ಬಾಕಿ ಇದ್ದು, ಅನುದಾನ ಮಂಜೂರಾದ ತಕ್ಷಣವೇ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಗದಗ ವಿಭಾಗೀಯ ಅಂಚೆ ಕಚೇರಿಯ ಸಹಾಯಕ ಎಂ.ಪಿ. ಕರಿಗಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾರಾಯಣಗುರು ನಿಗಮಕ್ಕೆ 500 ಕೋಟಿ ರು. ನೀಡದೆ ಸರ್ಕಾರ ವಂಚಿಸಿದೆ: ವಿಠಲ ಪೂಜಾರಿ
ಮಹಾರಾಷ್ಟ್ರ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ