ಕೃಷಿ ಸಾಲ ಮರುಪಾವತಿ ಅವಧಿ ಮುಂದೂಡಿ: ಡಾ. ದಿಲೀಷ್ ಶಶಿ

KannadaprabhaNewsNetwork |  
Published : Mar 10, 2026, 03:30 AM IST
ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯ ಅಡಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆ ಕೃಷಿ ಮಾಧ್ಯಮಿಕ ಸಾಲ ಮತ್ತು ಕೆಸಿಸಿ ಸಾಲದ ಮರುಪಾವತಿಯನ್ನು ಮುಂದೂಡುವ ಕುರಿತಂತೆ ನಿರ್ಣಯವನ್ನು ಸಿದ್ಧಪಡಿಸಬೇಕು.

ಎಲೆಚುಕ್ಕಿ ರೋಗದ ಕಾರಣ । ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯ ಅಡಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆ ಕೃಷಿ ಮಾಧ್ಯಮಿಕ ಸಾಲ ಮತ್ತು ಕೆಸಿಸಿ ಸಾಲದ ಮರುಪಾವತಿಯನ್ನು ಮುಂದೂಡುವ ಕುರಿತಂತೆ ನಿರ್ಣಯವನ್ನು ಸಿದ್ಧಪಡಿಸಿ ರಿಸರ್ವ್ ಬ್ಯಾಂಕ್‌ಗೆ ಸಲ್ಲಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು.

ಈಚೆಗೆ ಜಿಪಂ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಡಕೆ ಬೆಳೆಗಾರರು ಎಲೆಚುಕ್ಕೆ ರೋಗದ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆ ಸಹಕಾರ ಸಂಘಗಳಲ್ಲಿ ಕೃಷಿಕ ಸದಸ್ಯರು ಏ.15ಕ್ಕೆ ಮರುಪಾವತಿಸಬೇಕಾದ ಕೃಷಿ ಮಾಧ್ಯಮಿಕ ಸಾಲದ ಕಂತುಗಳನ್ನು 1 ವರ್ಷದ ಅವಧಿಗೆ ಮುಂದೂಡುವ ಹಾಗೂ ಏ. 30ಕ್ಕೆ ತುಂಬಬೇಕಾದ ಕೆಸಿಸಿ ಸಾಲವನ್ನು 1 ವರ್ಷದ ವರೆಗೆ ವಢಾಯಿಸಿ ಕೊಡುವ ಕುರಿತಂತೆ, ಶಿರಸಿಯ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿಯ ಅಧಿಕಾರಿಗಳು, ಕೃಷಿಕರ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ಸಲ್ಲಿಸಿದ ಮನವಿ ಪುರಸ್ಕರಿಸಿದ ಅವರು, ಜಿಲ್ಲೆಯ ಅಡಕೆ ಬೆಳೆಗಾರರ ಸಂಕಷ್ಟ ಪರಿಸ್ಥಿತಿಯ ಕುರಿತು ಸಹಮತ ವ್ಯಕ್ತಪಡಿಸಿ, ಸಾಲ ಮರುಪಾವತಿ ಅವಧಿ ಮುಂದೂಡುವ ಬಗ್ಗೆ ಸಭೆಯ ನಿರ್ಣಯ ಸಿದ್ದಪಡಿಸಿ ಕಳುಹಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಅನುಪಾತ ಶೇ.46.6 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಾಗಿದೆ. ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಣೆ ಮಾಡುವಂತೆ ತಿಳಿಸಿದ ಅವರು, ವಸತಿ ಹಾಗೂ ಶೈಕ್ಷಣಿಕ ಉದ್ದೇಶ, ಸ್ವ ಉದ್ಯೋಗ ಕೈಗೊಳ್ಳುವವರು, ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸದೇ, ಅರ್ಜಿಗಳಲ್ಲಿನ ದೋಷ ಸರಿಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸಾಲದ ಅರ್ಜಿಗಳನ್ನು ಮಂಜೂರು ಮಾಡುವಂತೆ ತಿಳಿಸಿದರು.

ಬ್ಯಾಂಕ್‌ಗಳಲ್ಲಿ ದೊರೆಯುವ ವಿವಿಧ ಸಾಲ ಯೋಜನೆಗಳ ಕುರಿತಂತೆ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಚಟುವಟಿಕೆ ಕೈಗೊಳ್ಳುವಂತೆ ಮತ್ತು ಖಾಸಗಿ ಬ್ಯಾಂಕ್ ಗಳು ಸಾಲ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ಪರಿಶೀಲನೆ ನಡೆಸುವಂತೆ ತಿಳಿಸಿದರು.

ಪ್ರಸಕ್ತ ಸಾಲಿನ ಡಿಸೆಂಬರ್ ವರೆಗೆ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ₹25208 ಕೋಟಿ ಠೇವಣಿ ಸಂಗ್ರಹಿಸಿದ್ದು, ₹12013 ಕೋಟಿ ಸಾಲ ವಿತರಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಲೆಕ್ಕಾಧಿಕಾರಿ ಆನಂದ್ ಹಬೀಬ್, ನಬಾರ್ಡ್ ಮೆನೇಜರ್ ಸುಶೀಲ್ ನಾಯ್ಕ, ಲೀಡ್ ಬ್ಯಾಂಕ್ ಮ್ಯಾನೇಜರ್ ರಾಜಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಹಕ್ಕುಗಳ ರಕ್ಷಣೆಗೆ ಜಾಗೃತಿ ಅಗತ್ಯ
ಕನಕಗಿರಿಯಲ್ಲಿ ನಿಲ್ಲದ ಕಳ್ಳತನ