ಕನ್ನಡಪ್ರಭ ವಾರ್ತೆ ಹುನಗುಂದ
ಚುನಾವಣೆ ಅಧಿಕಾರಿ, ಸಹಾಯಕ ಚುನಾವಣೆ ಅಧಿಕಾರಿ ಕೆಲವು ಬ್ಯಾಲೇಟ್ ಪೇಪರ್ಗಳನ್ನು ಹರಿದು ಅಕ್ರಮವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ತಾಲೂಕಿನ ಗಂಜೀಹಾಳ ಗ್ರಾಮದಲ್ಲಿ ಭಾನುವಾರ ನಡೆದಿದ್ದ ಪಿ.ಕೆ.ಪಿ.ಎಸ್. ಚುನಾವಣೆ ರದ್ದುಗೊಂಡು ಮುಂದೂಡಲಾಯಿತು.ಚುನಾವಣಾ ಅಧಿಕಾರಿ ಎಂ.ಎಸ್.ಬೀಳಗಿ ಸಹಾಯಕ ಚುನಾವಣಾಧಿಕಾರಿ ಸಿದ್ದು ಶೀಲವಂತರ ಚುನಾವಣೆಯ ಬ್ಯಾಲೇಟ್ ಪೇಪರ್ ಅನ್ನು ಕೆಲವು ಬ್ಯಾಲೇಟ್ ಪೇಪರ್‌ಗಳನ್ನು ಅಕ್ರಮವಾಗಿ ಹರಿದು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ವಿರೇಶ ಉಂಡೋಡಿ ಮತ್ತು ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಹೋರಾಟಕ್ಕಿಳಿದ ಬಿಜೆಪಿ ಕಾರ್ಯಕರ್ತರನ್ನು ಸಿಪಿಐ ಸುನೀಲ ಸವದಿ ಪಿಎಸ್‌ಐ ಚನ್ನಯ್ಯ ದೇವೂರ ಮನವೊಲಿಸುವ ಪ್ರಯತ್ನ ಮಾಡಿದರೂ ಬಗ್ಗದ ಪ್ರತಿಭಟನಾಕಾರರು ಚುನಾವಣಾಧಿಕಾರಿ ನಮ್ಮ ಎದುರಿಗೆ ಬಂದು ಹೇಳಿಕೆ ನೀಡಿ ಹೋಗಬೇಕು ಎಂದು ಪಟ್ಟು ಹಿಡಿದರು.
ಬ್ಯಾಲೇಟ್ ಪೇಪರ್‌ಗಳನ್ನು ಗ್ರಾಮದ ಚುನಾವಣಾ ಕೊಠಡಿಯೊಳಗೆ ಇಟ್ಟು ಹೋಗಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಚುನಾವಣಾ ಅಧಿಕಾರಿಯನ್ನು ಪ್ರತಿಭಟನಾಕಾರರ ಮುಂದೆ ಕರೆಸಿದ ಸಂದರ್ಭದಲ್ಲಿ ಚುನಾವಣಾಧಿಕಾರಿ ಎಂ.ಎಸ್. ಬೀಳಗಿ ಈ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ತದನಂತರ ಚುನಾವಣಾ ಬ್ಯಾಲೇಟ್‌ಗಳನ್ನು ಬಾಗಲಕೋಟೆಯ ಚುನಾವಣಾ ಕಚೇರಿಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು.ನಂತರ ಬಿಜೆಪಿ ಮುಖಂಡ ಮಾಜಿ ಜಿಪಂ ಸದಸ್ಯ ವಿರೇಶ ಉಂಡೋಡಿ ಮಾತನಾಡಿ, ಶಾಸಕ ವಿಜಯಾನಂದ ಕಾಶಪ್ಪನವರ ಕುಮ್ಮಕ್ಕಿನಿಂದ ಮತ್ತು ಸ್ವಜಾತಿ ಅಧಿಕಾರದಿಂದ ಅಕ್ರಮ ಚುನಾವಣೆ ಮಾಡುತ್ತಿದ್ದಾರೆ. ಚುನಾವಣೆಯ ನಾಮಪತ್ರ ಸಲ್ಲಿಸುವವರೆಗೂ ಹಿಡಿದು ಚುನಾವಣೆ ಮತದಾನದವರೆಗೂ ಅನೇಕ ಆಕ್ರಮಗಳನ್ನು ಮಾಡಿದ್ದಾರೆ. ಸಹಕಾರಿಯನ್ನು ರಾಜಕೀಯಗೊಳಿಸಿ 5 ಬಿಜೆಪಿ ಬೆಂಬಲಿಗರ ಅಭ್ಯರ್ಥಿಗಳನ್ನು ಕಾರಣವಿಲ್ಲದೇ ನಾಮಪತ್ರವನ್ನು ತಿರಸ್ಕಾರ ಮಾಡಿದ್ದಾರೆ. ನಂತರ ಹೈಕೋರ್ಟ್‌ನಿಂದ ನಿರ್ದೇಶನ ಬಂದ ಅದರಲ್ಲಿ 3 ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಿದ್ದು ತಪ್ಪಿದೆ. ಅವರನ್ನು ಅಭ್ಯರ್ಥಿ ಎಂದು ಪರಿಗಣಿಸಿ ಎಂದು ಘೋಷಣೆ ಆದೇಶ ಮಾಡಿದ್ದು ಮಧ್ಯಾಹ್ನದ 3 ಗಂಟೆವರೆಗೆ ಅಭ್ಯರ್ಥಿಗಳಿಗೆ ಚಿಣ್ನೆಯನ್ನು ನೀಡದೇ ಅಧಿಕಾರಿಗಳು ಸತಾಯಿಸಿದ್ದಾರೆ ಎಂದು ಆರೋಪಿಸಿದರು.
ಪ್ರತಿಯೊಂದು ಮತದಾನದ ಬ್ಯಾಲೇಟ್ ಕಟ್‌ನಲ್ಲಿ 8-10 ಮತ ಪತ್ರಗಳನ್ನು ಹರಿದುಕೊಂಡು ಒಬ್ಬ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಚುನಾವಣೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಚುನಾವಣೆಯ ಅಧಿಕಾರಿಗಳು ಆಗಲು ಯೋಗ್ಯತೆ ಇಲ್ಲದ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಶಾಸಕರ ಪರವಾಗಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಅವರೇ ತೀರ್ಮಾಣವನ್ನು ಅಧಿಕಾರಿಗಳು ಮಾಡಿದ್ದಾರೆ.ಚುನಾವಣೆಯ ತೀರ್ಮಾನವನ್ನು ಮಾಡುವ ಇಲ್ಲಿಯ ಶೇರುದಾರರು ಮತದಾರರು. ಆದರೆ ಅಲ್ಲಿನ ಬ್ಯಾಲೇಟ್ ಪತ್ರವನ್ನು ತಾವೇ ಅಲ್ಲಿನ ಮತ ಪೆಟ್ಟಿಗೆಯಲ್ಲಿ ಹಾಕಲು ಉದ್ದೇಶವನ್ನು ಹೊಂದಿದ್ದು ತಿಳಿದು ಬಂದಿದೆ. ಜಿಲ್ಲಾ ಚುನಾವಣೆಯ ಅಧಿಕಾರಿಗಳು ಬರಲು ಒತ್ತಾಯಿಸಿದ್ದೇವೆ. ಆದರೆ, ಪತಪತ್ರಗಳನ್ನು ಚುನಾವಣೆಯ ಕಾರ್ಯಾಲಯದಲ್ಲಿ ಇಡಬೇಕೆಂದು ವಿನಂತಿಸಿ ಒತ್ತಾಯಿಸಿದರೇ ಪೋಲಿಸರು ನಮ್ಮ ಮೇಲೆ ದೌರ್ಜನ್ಯವನ್ನು ಸಹಕಾರಿಯ ಸದಸ್ಯರ ಮೇಲೆ ಮಾಡಿ ಜಿಲ್ಲಾ ಚುನಾವಣೆಯ ಕಾರ್ಯಲಯಕ್ಕೆ ಮತಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.