ರಾಣಿಬೆನ್ನೂರು: ಬೆಂಗಳೂರಿನ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ಕೃಷ್ಣಾಪುರ-ತೆರೆದಹಳ್ಳಿ ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಯ ಮುಂಭಾಗದಲ್ಲಿ ಸೋಮವಾರ ಕೋಳಿ ಸಾಕಾಣಿಕೆದಾರರು ಮತ್ತು ರೈತರು ಧರಣಿ ಸತ್ಯಾಗ್ರಹ ನಡೆಸಿದರು.
ಕೋಳಿ ಸಾಕಾಣಿಕೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಓಲೇಕಾರ ಮಾತನಾಡಿ, ಹಲವಾರು ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಂಪನಿಯವರಿಗೆ ಹಾಗೂ ತಹಶೀಲ್ದಾರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಮನವಿ ಪತ್ರಗಳ ಮೂಲಕ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾವು ರಾಜ್ಯದ ವಿವಿಧ ಭಾಗಗಳಿಂದ ಕೋಳಿಸಾಕಾಣಿಕೆ ರೈತರು ಆಗಮಿಸಿ ಇಂದು ಧರಣಿ ಸತ್ಯಾಗ್ರಹವನ್ನು ಕೈಗೊಂಡಿದ್ದೇವೆ. ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದರೆ ಧರಣಿ ಸತ್ಯಾಗ್ರಹದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಅದಕ್ಕೆ ಕಂಪನಿಯವರು ಮತ್ತು ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.
ಕೋಳಿ ಸಾಕಾಣಿಕೆದಾರರ ರಾಜ್ಯ ಉಪಾಧ್ಯಕ್ಷ ಶಂಕರಗೌಡ ಗಂಗನೌಡ ಈರನಗೌಡ್ರ, ಸುಭಾಸಗೌಡ್ರ, ನಾಗರಾಜ ಗೊರೋಜಿ, ಬಸನಗೌಡ ಗಂಗನಗೌಡ್ರ, ಮಂಜಪ್ಪ ಮಜ್ಜಗಿ, ಮಂಜಪ್ಪ ಗುಗ್ಗರಿ, ಸಿಪಿಯು ರಾಜ್ಯಾಧ್ಯಾಕ್ಷ ತ್ಯಾಗರಾಜ, ಕೆಪಿಎಸ್ ರಾಜ್ಯಾಧ್ಯಕ್ಷ ಗಂಗರಾಜ ಹಾಗೂ ಕೂಡ್ಲಗಿ, ಕೊಟ್ಟೂರು, ದಾವಣಗೆರೆ, ವಿಜಯನಗರ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳ ಕೋಳಿಸಾಕಾಣಿಕೆದಾರ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.