ಸಾಧನೆಗೆ ಬಡತನ ಅಡ್ಡಿಯಲ್ಲ, ಛಲ ಮುಖ್ಯ

KannadaprabhaNewsNetwork | Published : Nov 10, 2024 1:37 AM

ಸಾರಾಂಶ

ನಮ್ಮಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗದಿರಲು ಭಾಷೆಗಳ ಕೊರತೆ ಮುಖ್ಯ ಕಾರಣ

ಮುಂಡರಗಿ:ನಾವು ಓದಿ ಉನ್ನತ ಹುದ್ದೆಗೇರಿ ಸಾಧನೆ ಮಾಡಲು ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ. ಸಾಧನೆಗೆ ಛಲ ಮುಖ್ಯ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಹೇಳಿದರು.

ಅವರು ಶನಿವಾರ ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯ ಸಭಾಭವನದಲ್ಲಿ ಅವ್ವ ಸಮಾಜ ಸೇವಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕ.ರಾ. ಬೆಲ್ಲದ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗದಿರಲು ಭಾಷೆಗಳ ಕೊರತೆ ಮುಖ್ಯ ಕಾರಣವಾಗುತ್ತದೆ. ಪರೀಕ್ಷೆಯಲ್ಲಿ ಯಶಸ್ವಿಯಾಗದಿರಲು ಕಾರಣ ಆಂಗ್ಲ ಭಾಷೆಯ ಕೊರತೆ ಹಾಗೂ ಕಂಪ್ಯೂಟರ್ ಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಾಗಿರುವುದು. ಹೀಗಾಗಿ ವಿದ್ಯಾರ್ಥಿಗಳಿ ಮೊದಲು ಅವರಲ್ಲಿರುವ ನಿರಾಶಾವಾದವೇನೆಂಬುದನ್ನು ತಿಳಿದುಕೊಳ್ಳಬೇಕು. ಅಂದಾಗ ಅವುಗಳನ್ನು ಸರಿಪಡಿಸಿಕೊಂಡು ಓದಲು ಅನುಕೂಲವಾಗುತ್ತದೆ. ಒಳ್ಳೆಯ ಗುರಿ ಇಟ್ಟುಕೊಂಡು ಓದುವವರಿಗೆ ಉತ್ತಮವಾದ ಅವಕಾಶಗಳು ದೊರೆಯುತ್ತವೆ.

ಎಲ್ಲರೂ ಎಸಿ, ಎಡಿಸಿ, ಡಿಸಿ ಹುದ್ದೆ ಏರುವ ಕನಸು ಕಾಣುವುದು ತಪ್ಪಲ್ಲ. ಅದಕ್ಕೆ ತಕ್ಕಂತೆ ಅತ್ಯಂತ ಪರಿಶ್ರಮ ವಹಿಸಿ ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಗಳ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಹಾಗೂ ಅಲ್ಲಿ ಓದುವ ವಿದ್ಯಾರ್ಥಿಗಳ ತಯಾರಿ ಸೇರಿದಂತೆ ಎಲ್ಲವನ್ನೂ ವೀಕ್ಷಿಸಿ ಅದರಂತೆ ಓದಲು ಮುಂದಾಗಬೇಕು. ಇಂದಿನ ಮಕ್ಕಳಲ್ಲಿ ಪರಿಶ್ರಮದ ಕೊರತೆ ಇದ್ದು, ಆದರಿಂದ ಅವರು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಸತತ ಪರಿಶ್ರಮದ ಫಲದಿಂದ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಪ್ರತಿಷ್ಠಾನ ಉದ್ಘಾಟಿಸಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಇದೀಗ ಉದ್ಘಾಟನೆಗೊಂಡಿರುವ ಈ ಪ್ರತಿಷ್ಠಾನ ಟ್ರಸ್ಟ್‌ ನಿಂದ ನಿರಂತರವಾಗಿ ಉತ್ತಮ ಕಾರ್ಯಗಳು ನಡೆಯುವಂತಾಗಲಿ. ಪ್ರತಿಷ್ಠಾನ ಉದ್ಘಾಟನೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಆಯೋಜಿಸುವುದು ಸೂಕ್ತವಾಗಿದೆ ಎಂದರು.

ಪುರಸಭೆ ಉಪಾಧ್ಯಕ್ಷ ನಾಗೇಶಹುಬ್ಬಳ್ಳಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕ ತಾಯೆಂದಿರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಷ್ಠಾನ ಅಧ್ಯಕ್ಷ ನಾಗರಾಜ ಮುರುಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ವಿ.ಎಫ್.ಗುಡದಪ್ಪನವರ, ಪ್ರಾ. ಡಾ.ಡಿ.ಸಿ.ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂತೋಷಕಮಾರ ಮುರುಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸಂತೋಷ ಹಿರೇಮಠ ನಿರೂಪಿಸಿದರು.

Share this article