ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯುತ್ ಬಿಲ್ ಪಾವತಿಸಿಲ್ಲವೆಂಬ ಕಾರಣಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಂಡ್ಯ ಕಚೇರಿ ಸಂಕೀರ್ಣದ ಪವರ್ ಕಟ್ ಮಾಡಲಾಗಿದ್ದು, ಕಳೆದೊಂದು ತಿಂಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರಿತಪಿಸುವಂತಾಗಿದೆ. ಕಚೇರಿ ಸಂಕೀರ್ಣದಲ್ಲಿದ್ದ ಜನಸೇವಾ ಕೇಂದ್ರ ವಿದ್ಯುತ್ ಕಡಿತಗೊಂಡ ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿಗೆ ಸ್ಥಳಾಂತರಗೊಂಡಿದೆ. ಅಲ್ಲೇ ಇರುವ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದಲ್ಲೂ ಕೆಲಸ ಅಸ್ತವ್ಯಸ್ತಗೊಂಡಿದೆ..!ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸದಿರುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಸುಮಾರು ೧೬ ಸಾವಿರಕ್ಕೂ ಹೆಚ್ಚು ಹಣ ಪಾವತಿಸಬೇಕಾಗಿರುವುದಾಗಿ ತಿಳಿದುಬಂದಿದೆ.
ಹಳೇ ತಾಲೂಕು ಕಚೇರಿ ಇದ್ದ ಕಟ್ಟಡ ತದನಂತರದಲ್ಲಿ ಸೆಂಟ್ರಲ್ ಪೊಲೀಸ್ ಠಾಣೆಯಾಗಿ ಪರಿವರ್ತನೆಗೊಂಡಿತ್ತು. ಆ ನಂತರದಲ್ಲಿ ವಿದ್ಯುತ್ ಮೀಟರ್ ಕೂಡ ಸೆಂಟ್ರಲ್ ಠಾಣೆ ಹೆಸರಿಗೆ ಬದಲಾವಣೆಗೊಂಡಿತ್ತು. ಆ ಸಮಯದಲ್ಲಿ ಪೊಲೀಸ್ ಇಲಾಖೆ ವಿದ್ಯುತ್ ಬಿಲ್ ಪಾವತಿಸಿಕೊಂಡು ಬರುತ್ತಿತ್ತು.ಸೆಂಟ್ರಲ್ ಪೊಲೀಸ್ ಠಾಣೆ ಮಂಡ್ಯ ಕೆರೆಯಂಗಳದ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡ ನಂತರ ಕಚೇರಿ ಸಂಕೀರ್ಣದ ವಿದ್ಯುತ್ ಮೀಟರ್‌ನ್ನು ಯಾರ ಹೆಸರಿಗೂ ಬದಲಾವಣೆ ಮಾಡಿರಲಿಲ್ಲ. ಆ ನಂತರದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರು ತಮ್ಮ ಕಚೇರಿ ಕೆಲಸ ನಿರ್ವಹಣೆಗಾಗಿ ಆ ಕಟ್ಟಡವನ್ನು ಪಡೆದುಕೊಂಡಿದ್ದರು.
ಒಳಗೆ ಶಾಸಕರ ಪ್ರತ್ಯೇಕ ಕಚೇರಿ, ಮತ್ತೊಂದು ಸಭಾಂಗಣ, ಆಪ್ತ ಸಹಾಯಕರ ಕೊಠಡಿಯಾಗಿ ರೂಪಾಂತರಿಸಿಕೊಂಡಿದ್ದಾರೆ. ಆದರೆ, ಮೀಟರ್ ಸೆಂಟ್ರಲ್ ಪೊಲೀಸ್ ಠಾಣೆ ಹೆಸರಿನಲ್ಲೇ ಮುಂದುವರೆದಿದೆ. ಈಗ ವಿದ್ಯುತ್ ಬಿಲ್ ಪಾವತಿಸಬೇಕಾದವರು ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ.ಇದೇ ಕಚೇರಿ ಸಂಕೀರ್ಣದಲ್ಲಿ ಜನಸೇವಾ ಕೇಂದ್ರವೂ ಕಾರ್ಯನಿರ್ವಹಿಸುತ್ತಿತ್ತು. ಸಾರ್ವಜನಿಕರು ಮತ್ತು ರೈತರಿಗೆ ಅಗತ್ಯವಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ನೋಂದಣಿ, ಸೇವೆಗಳ ದೃಢೀಕೃತ ಪತ್ರಗಳಿಗೆ ಅರ್ಜಿ ಸ್ವೀಕಾರ, ಪ್ರಮಾಣಪತ್ರ ವಿತರಣೆ, ವಿಧವಾ, ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷ ವೇತನ ಇನ್ನಿತರ ಯೋಜನೆಗಳಿಗೆ ಅರ್ಜಿ ಸ್ವೀಕಾರ, ಮಂಜೂರಾತಿ, ಪಹಣಿ ಪತ್ರ ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತಿತ್ತು.
ವಿದ್ಯುತ್ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾದ ಸೇವೆಗಳನ್ನು ಒದಗಿಸುತ್ತಿದ್ದ ಜನಸೇವಾ ಕೇಂದ್ರ ಕೆಲಸ ನಿರ್ವಹಿಸಲಾಗದೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಸ್ಥಳಾಂತರಗೊಂಡಿದೆ.ಕಚೇರಿಯ ಬಾಗಿಲು ಬಂದ್ ಆಗಿದೆ. ವಿವಿಧ ಸೇವೆಗಳನ್ನು ಪಡೆಯಲು ಬರುವವರು ಬಾಗಿಲು ಹಾಕಿರುವುದನ್ನು ಕಂಡು ವಾಪಸ್ ತೆರಳುತ್ತಿದ್ದಾರೆ. ಸೇವಾ ಕೇಂದ್ರಗಳನ್ನು ಹುಡುಕಿಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಚೇರಿ ಸಂಕೀರ್ಣದ ಮತ್ತೊಂದು ಬದಿಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವಿದೆ. ಇದು ಕೂಡ ಹಿರಿಯ ನಾಗರಿಕರ ಸಮಸ್ಯೆ ಆಲಿಸಿ ಅವರಿಗೆ ನ್ಯಾಯ ದೊರಕಿಸುವ ಕಾರ್ಯ ನಿರ್ವಹಿಸುತ್ತಿದೆ. ವಿದ್ಯುತ್ ಇಲ್ಲದಿರುವ ಕಾರಣ ಕಂಪ್ಯೂಟರ್‌ಗೆ ಸಂಬಂಧಿಸಿದಂತೆ ಪ್ರತಿಗಳನ್ನು ಪಡೆಯುವುದಕ್ಕೆ ಜಿಲ್ಲಾಸ್ಪತ್ರೆ ರಸ್ತೆಯಲ್ಲಿರುವ ಸ್ವಾಧಾರ್ ಕೇಂದ್ರಕ್ಕೆ ಬರುವಂತಾಗಿದೆ. ಇದು ಎಸ್‌ಪಿ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.ವಿದ್ಯುತ್ ಕಡಿತದಿಂದಾಗಿ ಶಾಸಕರ ಕಚೇರಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಕೆಲಸ-ಕಾರ್ಯಗಳಿಗೆ ತೀವ್ರ ಅಡಚಣೆ ಎದುರಾಗಿದೆ. ಆದರೆ, ಈ ವಿಷಯವನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಇಡೀ ಕಚೇರಿ ಸಂಕೀರ್ಣಕ್ಕೆ ಒಂದೇ ಮೀಟರ್ ಇದ್ದು, ಅದು ಸೆಂಟ್ರಲ್ ಪೊಲೀಸ್ ಠಾಣೆ ಹೆಸರಿನಲ್ಲಿ ಮೀಟರ್ ಇರುವುದರಿಂದ ಪೊಲೀಸ್ ಇಲಾಖೆಯವರೇ ವಿದ್ಯುತ್ ಬಿಲ್ ಪಾವತಿಸಬೇಕು ಎಂಬುದಾಗಿ ತಾಲೂಕು ಕಚೇರಿಯವರು ಹೇಳುತ್ತಿದ್ದರೆ, ಪೊಲೀಸ್ ಠಾಣೆ ಖಾಲಿ ಮಾಡಿರುವುದರಿಂದ ವಿದ್ಯುತ್ ಬಿಲ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸ್ ಇಲಾಖೆಯವರು ಬಿಲ್ ಪಾವತಿಸದೆ ಮೌನ ವಹಿಸಿದ್ದಾರೆ. ಹೀಗಾಗಿ ವಿದ್ಯುತ್ ಬಿಲ್ ಪಾವತಿ ಯಾರ ಜವಾಬ್ದಾರಿ ಎನ್ನುವುದು ಪ್ರಶ್ನೆಯಾಗಿದೆ.ಕಚೇರಿ ಸಂಕೀರ್ಣದಲ್ಲಿ ಒಂದೇ ಮೀಟರ್ ಇದೆ. ಅದು ಸೆಂಟ್ರಲ್ ಪೊಲೀಸ್ ಠಾಣೆ ಹೆಸರಿನಲ್ಲಿದೆ. ವಿದ್ಯುತ್ ಬಿಲ್ ೧೬ ಸಾವಿರ ರು.ನಷ್ಟು ಬಾಕಿ ಇದೆ. ವಿದ್ಯುತ್ ಬಿಲ್ ಬಾಕಿ ಇರುವ ಕಾರಣಕ್ಕೆ ಸಂಪರ್ಕ ಕಡಿತಗೊಳಿಸಲಾಗಿದೆ. ಬಾಕಿ ಪಾವತಿಯಲ್ಲಿರುವ ಗೊಂದಲವನ್ನು ಸರಿಪಡಿಸಿ ಬಿಲ್ ಮೊತ್ತ ಪಾವತಿಸಲಾಗುವುದು. ಶೀಘ್ರ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು.
- ಶಿವಕುಮಾರ್ ಬಿರಾದಾರ್, ತಹಸೀಲ್ದಾರ್, ಮಂಡ್ಯ