ಕನ್ನಡಪ್ರಭ ವಾರ್ತೆ ಬೆಂಗಳೂರು
ಶಾಸಕ ಎಸ್.ಟಿ.ಸೋಮಶೇಖರ್ ಅವರಿಗೆ ಜನಸೇವೆಗಿಂತ ಅಧಿಕಾರವೇ ಮುಖ್ಯವಾಗಿದೆ. ಇಂತಹ ಕುತಂತ್ರ ರಾಜಕಾರಣ ಮಾಡುವವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯಶವಂತಪುರ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಎಚ್ಚರಿಸಿದ್ದಾರೆ.ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಸೋಮಶೇಖರ್ ಅವರಂತೆ ಕುತಂತ್ರ, ಪಕ್ಷಾಂತರ ರಾಜಕಾರಣ ನಾವು ಮಾಡುತ್ತಿಲ್ಲ. ಅಧಿಕಾರಕ್ಕೆ ಅಂಟಿಕೊಂಡಿರುವವರಿಗೆ ಜನರೇ ಪಾಠ ಕಲಿಸಲಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಅವರೇ ದೇವರು ಎಂದು ಸೋಮಶೇಖರ್ ಹೇಳಿದರು. ಕೊನೆಗೆ ಬಿಜೆಪಿಗೆ ಸೇರ್ಪಡೆಯಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೂರಾರು ಕೋಟಿ ರು. ಲೂಟಿ ಮಾಡಿದರು. ಈಗ ಪುನಃ ಕಾಂಗ್ರೆಸ್‌ನವರ ಹಿಂದೆ ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಅಧಿಕಾರಕ್ಕಾಗಿ ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ಕಾರಿನಲ್ಲಿ ಸುತ್ತಾಡುತ್ತಿದ್ದಾರೆ. ಮತದಾರರ ಋಣ ತೀರಿಸುವ ಬಗ್ಗೆ ಯೋಚಿಸುತ್ತಿಲ್ಲ. ನಿಮಗೆ ನಾಚಿಕೆ ಇಲ್ಲವೇ. ಮುಂದಿನ ದಿನಗಳಲ್ಲಿ ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಿಸಿದರು.
ಅಭ್ಯರ್ಥಿ ಶೋಭಾ ಕರಂದ್ಲಾಜೆ, ಶಾಸಕ ಗೋಪಾಲಯ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಮಾರೇಗೌಡ ಹಾಜರಿದ್ದರು.ಲಕ್ಷ ಮತಗಳಿಂದ ಶೋಭಾ ಗೆಲುವು:ನಾವು ಕುತಂತ್ರಿ ರಾಜಕಾರಣಿಗಳಲ್ಲ, ನಂಬಿಸಿ ಕತ್ತು ಕೊಯ್ಯುವವರಲ್ಲ. ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಒಂದು ಲಕ್ಷದ ಮತಗಳ ಅಂತರದಿಂದ ಜಯಗಳಿಸುವಂತೆ ಮಾಡಲು ಕಾರ್ಯಕರ್ತರು, ಮುಖಂಡರು ಹಗಲು-ರಾತ್ರಿ ಶ್ರಮಿಸುತ್ತೇವೆ. ಜಯಗಳಿಸಿದ ನಂತರ ನಮ್ಮ ಕಾರ್ಯಕರ್ತರ ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜವರಾಯಿಗೌಡ ಮನವಿ ಮಾಡಿದರು.