ರಾಜಕಾರಣಿಗಳಿಗೂ ಅಧಿಕಾರ ಶಾಶ್ವತವಲ್ಲ: ಆರ್.ನರೇಂದ್ರ

KannadaprabhaNewsNetwork | Published : Aug 23, 2024 1:03 AM

ಸಾರಾಂಶ

ಮನುಷ್ಯನಿಗೆ ಜೀವನವೇ ಶಾಶ್ವತವಲ್ಲ. ಅದೇ ರೀತಿ ಯಾವ ರಾಜಕಾರಣಿಗಳಿಗೂ ಅಧಿಕಾರ ಶಾಶ್ವತವಲ್ಲ, ಸಾರ್ವಜನಿಕರು ಅಧಿಕಾರ ಕೊಟ್ಟಾಗ ಯಾವ ರೀತಿ ಸ್ಪಂದನೆ ಮಾಡಿದ್ದೇವೆ ಎಂಬುದೇ ಮುಖ್ಯ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು. ಹನೂರಿನ ಮಲೆ ಮಹದೇಶ್ವರ ಬೆಟ್ಟದ ಮಹದೇವ ನಗರದ ಮಕ್ಕಳ ಮಾರಮ್ಮ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಮನುಷ್ಯನಿಗೆ ಜೀವನವೇ ಶಾಶ್ವತವಲ್ಲ. ಅದೇ ರೀತಿ ಯಾವ ರಾಜಕಾರಣಿಗಳಿಗೂ ಅಧಿಕಾರ ಶಾಶ್ವತವಲ್ಲ, ಸಾರ್ವಜನಿಕರು ಅಧಿಕಾರ ಕೊಟ್ಟಾಗ ಯಾವ ರೀತಿ ಸ್ಪಂದನೆ ಮಾಡಿದ್ದೇವೆ ಎಂಬುದೇ ಮುಖ್ಯ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಹದೇವ ನಗರದ ಮಕ್ಕಳ ಮಾರಮ್ಮ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾತೀಯತೆ ಎಂಬುದು ತೊಲಗಿದೆ. ಈ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರು ಆಗಮಿಸಿರುವುದೇ ಇದಕ್ಕೆ ಸಾಕ್ಷಿ. ಕ್ಷೇತ್ರ ವ್ಯಾಪ್ತಿಯ 37 ಗ್ರಾಮಗಳಲ್ಲಿ ಆದಿ ಜಾಂಬವ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಆದರೆ ನಾನು ಶಾಸಕನಾಗಿದ್ದಾಗ 40 ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದ್ದೇನೆ. ಹಲವಾರು ದೇವಸ್ಥಾನಗಳಿಗೆ ಅನುದಾನ ನೀಡಿದ್ದೇನೆ. ಈ ದೇವಾಲಯಕ್ಕೂ ನಾಲ್ಕು ಲಕ್ಷ ರು.ಅನುದಾನ ನೀಡಿದ್ದೆ. ಆದರೆ ಶಾಸಕರು ಇದನ್ನು ಬದಲಾವಣೆ ಮಾಡಿದ್ದಾರೆ. ಇವರೇ ಮುಂದಿನ ದಿನಗಳಲ್ಲಿ 10 ಲಕ್ಷ ಅನುದಾನ ನೀಡಿ ಉತ್ತಮ ದೇವಸ್ಥಾನ ನಿರ್ಮಾಣ ಮಾಡಿಕೊಳ್ಳಲು ಸಹಕಾರ ನೀಡಬೇಕು ಎಂದು ತಿಳಿಸಿದರು.

ಮಾಜಿ ಸಚಿವ ನಾರಾಯಣಸ್ವಾಮಿ ಅವರು ಇತ್ತೀಚಿನ ರಾಜಕೀಯ ವೈಖರಿಗೆ ಬೇಸತ್ತು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. ಆದರೆ ಜನರ ಮಧ್ಯೆ ಇದ್ದು ಅವರು ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಸಾಮಾಜಿಕ ಕಳಕಳಿ ಮೆಚ್ಚುವಂತದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಜೀವನದಲ್ಲಿ ಸಾಧನೆ ಮಾಡಲು ಶಿಕ್ಷಣ ಅತಿ ಮುಖ್ಯ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಅವರಿಗೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಹಕಾರ ನೀಡಬೇಕು. ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡದೆ ಅವರಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಭಕ್ತಿಗಾಗಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತೇವೆ. ಆದರೆ ನಮ್ಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅತಿ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಈ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಲೂರು ಬೃಹನ್ ಮಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಕೇಂದ್ರದ ಮಾಜಿ ಸಚಿವ ನಾರಾಯಣಸ್ವಾಮಿ, ಸಮಾಜದ ಮುಖಂಡರಾದ ಚಕ್ರವರ್ತಿ, ಅರಕಲವಾಡಿ ನಾಗೇಂದ್ರ, ಪ್ರಸನ್ನ, ಮಾದೇಶ್, ಜೆಡಿಎಸ್ ಮುಖಂಡ ಡಿ.ಆರ್.ಮಾದೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Share this article