ಕೃಷ್ಣ ಎನ್. ಲಮಾಣಿ
ಹೊಸಪೇಟೆ: ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಜಯಪುರದ ಕೂಡಗಿ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ತುಂಗಭದ್ರಾ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಹಾಯ್ದು ಹೋಗಿರುವ ಈ ವಿದ್ಯುತ್ ಲೈನ್ ಪಕ್ಷಿಗಳ ಪ್ರಾಣಕ್ಕೆ ಕುತ್ತು ತಂದಿದೆ.ಹಿನ್ನೀರು ಪ್ರದೇಶದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ಲೈನ್‌ಗೆ ಡಿಕ್ಕಿ ಹೊಡೆದು ವಿವಿಧ ಜಾತಿ ಅಪರೂಪದ ಪಕ್ಷಿಗಳು ಪ್ರಾಣ ಕಳೆದುಕೊಳ್ಳಲಾರಂಭಿಸಿವೆ. ಹಗರಿಬೊಮ್ಮನಹಳ್ಳಿಯ ಅಂಕಸಮುದ್ರ ಕೆರೆ ಪಕ್ಷಿಧಾಮವಾಗಿ ಪರಿವರ್ತನೆಯಾಗಿದೆ. ನಾರಾಯಣದೇವರ ಕೆರೆ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲೂ ಹಲವು ಜಾತಿಯ ಪಕ್ಷಿಗಳು ನೀರು, ಆಹಾರ ಅರಸಿ ಬರಲಾರಂಭಿಸಿವೆ. ಹಿನ್ನೀರು ಪ್ರದೇಶದಲ್ಲಿ ಅಳವಡಿಕೆ ಮಾಡಲಾಗಿರುವ ವಿದ್ಯುತ್ ತಂತಿಗಳೇ ಈಗ ಪಕ್ಷಿಗಳ ಪ್ರಾಣ ತೆಗೆಯಲಾರಂಭಿಸಿದೆ. ಹೀಗಿದ್ದರೂ ಸಂಬಂಧಿಸಿದ ಇಲಾಖೆಗಳು ಮಾತ್ರ ಮೌನಕ್ಕೆ ಶರಣಾಗಿವೆ. ಪಕ್ಷಿ ಪ್ರೇಮಿಗಳು ಹಲವು ಬಾರಿ ಮನವಿ ಮಾಡಿಕೊಂಡರೂ ಪರಿಹಾರ ದೊರೆಯದಾಗಿದೆ.
ಹಿನ್ನೀರು ಪ್ರದೇಶದಲ್ಲಿ ನೂರಾರು ಜಾತಿಯ ಸಾವಿರಾರು ಪಕ್ಷಿಗಳು ವಲಸೆ ಬರುತ್ತವೆ. ಅದರಲ್ಲೂ ರಾಜಹಂಸ, ಕೆಂಬರಲು ಹಕ್ಕಿ, ಪಟ್ಟೆತಲೆಯ ಹೆಬ್ಬಾತು, ಬಾಯ್ಕಳನ ಹಕ್ಕಿ ಸೇರಿದಂತೆ ನೂರಾರು ಹಕ್ಕಿಗಳಿವೆ. ಇಲ್ಲಿ ಹಾದುಹೋದ ವಿದ್ಯುತ್ ಲೈನ್ ಗೆ ಡಿಕ್ಕಿ ಹೊಡೆದು ಸಾಯುತ್ತಿವೆ. ಪಕ್ಷಿಗಳ ಉಳಿವಿಗೆ ಇಂಧನ, ಅರಣ್ಯ ಇಲಾಖೆಗಳು ಕ್ರಮ ವಹಿಸಬೇಕು ಎಂಬುದು ಪಕ್ಷಿಪ್ರೇಮಿಗಳ ಆಗ್ರಹ.
ವಿಜಯಪುರದ ಕೂಡಗಿಯಿಂದ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿರುವ ವಿದ್ಯುತ್ ಲೈನ್ ಹಿನ್ನೀರು ಪ್ರದೇಶದಲ್ಲಿ ಹಾಯ್ದು ಹೋಗಿದೆ. ಪಕ್ಷಿಪ್ರೇಮಿಗಳು ಪಕ್ಷಿ ವಲಯದಿಂದ ಎಂದು ಗುರುತಿಸಿರುವ ಹಿನ್ನೀರು ಪ್ರದೇಶದ 20 ಕಿ.ಮೀ. ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಗಳಿಗೆ ಮಿಂಚು ಫಲಕ ಅಳವಡಿಸಿದರೆ, ಪಕ್ಷಿಗಳು ಸಂಭಾವ್ಯ ಅಪಾಯದಿಂದ ಪಾರಾಗಲಿವೆ.ಇದಕ್ಕಾಗಿ ಈಗಾಗಲೇ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಪಕ್ಷಿ ಪ್ರೇಮಿಗಳ ತಂಡ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕ್ಷೇತ್ರ ಸರ್ವೇಕ್ಷಣೆ ಕೂಡ ಮಾಡಿಸಿದ್ದಾರೆ. ಆದರೆ, ಇನ್ನೂ ಮಿಂಚು ಫಲಕಗಳನ್ನು ಅಳವಡಿಸಿಲ್ಲ. ಈ ಮಿಂಚುಫಲಕಗಳು ಪಕ್ಷಿಗಳಿಗೆ ಸಹಕಾರಿ ಎಂಬುದು ಹಲವು ಸಂಶೋಧನೆಗಳಿಂದ ದೃಢವಾಗಿದೆ. ಇದರಿಂದ ಪಕ್ಷಿಗಳು ಸಂಭಾವ್ಯ ಅಪಾಯದಿಂದ ಪಾರಾಗಲಿವೆ. ಸಾವಿರಾರು ಪಕ್ಷಿಗಳು ವಾಸಿಸುವ ಪ್ರದೇಶದಲ್ಲಿ ವಿದ್ಯುತ್ ಲೈನ್‌ಗಳಿಗೆ ಮಿಂಚು ಫಲಕಗಳನ್ನು ಅಳವಡಿಸಬೇಕು ಎಂದು ಹೇಳುತ್ತಾರೆ ಪಕ್ಷಿ ಪ್ರೇಮಿ ವಿಜಯ್ ಇಟಗಿ.
ಜಲಾಶಯದ ಹಿನ್ನೀರು ಪ್ರದೇಶದಲ್ಲಿ ವಿದ್ಯುತ್ ಲೈನ್ ಹಾಯ್ದು ಹೋಗಿದೆ. ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹಗರಿಬೊಮ್ಮನಹಳ್ಳಿಯ ಪಶು ಆಸ್ಪತ್ರೆಯಲ್ಲಿ ನಾವು ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿದುಕೊಳ್ಳಲು ಪೋಸ್ಟ್ ಮಾರ್ಟಂ ಕೂಡ ಮಾಡಿಸಿದ್ದೇವೆ. ಪಕ್ಷಿ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎನ್ನುತ್ತಾರೆ ಪಕ್ಷಿಪ್ರೇಮಿ ವಿಜಯ್ ಇಟಗಿ.