ಮಾರುತಿ ಶಿಡ್ಲಾಪೂರ
೭,೨೮೪ ಕುಟುಂಬಗಳ ೩೫ ಸಾವಿರ ಜನಸಂಖ್ಯೆಯ ಹಾನಗಲ್ಲ ಪಟ್ಟಣಕ್ಕೆ ಸರತಿಯಂತೆ ದಿನಕ್ಕೆ ೩೫ ಸಾವಿರ ಲೀಟರ್ ಕುಡಿಯುವ ನೀರು ಬೇಕು. ಇದನ್ನು ಪೂರೈಸಲು ಪುರಸಭೆ ೩ ದಿನಕ್ಕೊಮ್ಮೆ ಇಡೀ ನಗರಕ್ಕೆ ಸರದಿಯಲ್ಲಿ ನೀರು ಪೂರೈಸುವ ಯೋಜನೆ ರೂಪಿಸಿಕೊಂಡಿದೆ. ಇದಕ್ಕಾಗಿ ನೀರಿನ ಕೊರತೆಯಿಲ್ಲ. ಪಟ್ಟಣಕ್ಕೆ ಹಲವು ದಶಕಗಳಿಂದ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆಯಲ್ಲಿ ಇನ್ನೂ ಎರಡು ತಿಂಗಳಿಗಾಗುವಷ್ಟು ನೀರಿದೆ. ಆದರೆ ವಿದ್ಯುತ್ ಪೂರೈಕೆಯ ವ್ಯತ್ಯಯದಿಂದಾಗಿ ಈಗ ೭-೮ ದಿನಕ್ಕೊಮ್ಮೆ ನೀರು ಪೂರೈಸುವ ಅನಿವಾರ್ಯತೆ ಪುರಸಭೆಗೆ ಇದೆ.
ಕುಡಿಯುವ ನೀರಿನ ಸರಬರಾಜಿಗಾಗಿ ೯೪ ಕಿಮೀ ಪೈಪ್‌ಲೈನ್, ಆನಿಕರೆಯಿಂದ ನೀರು ಪೂರೈಸುವ ಫಿಲ್ಟರ್ ಬೆಡ್ ವರೆಗೆ ೩.೫ ಕಿಮೀ ಪೈಪ್‌ಲೈನ್ ಸುವ್ಯವಸ್ಥಿತವಾಗಿದೆ. ಪಟ್ಟಣದಲ್ಲಿ ೧೧೦ ಕೊಳವೆಬಾವಿಗಳಿಂದಲೂ ಫಿಲ್ಟರ್ ಬೆಡ್‌ಗೆ ನೀರು ಪೂರೈಕೆ ಇದೆ. ಇದಲ್ಲದೆ ನೀರು ಕೊರತೆಯಾದರೆ ಧರ್ಮಾ ಜಲಾಶಯದಿಂದಲೂ ನೀರು ತರುವ ವ್ಯವಸ್ಥೆ ಇದೆ. ಆದರೆ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ನೀರಿಗೆ ತೊಂದರೆಯಾಗಿದೆ.ನಿರಂತರ ಬೇಕು: ಆನೆಕೆರೆಯಿಂದ ಫಿಲ್ಟರ್ ಬೆಡ್‌ಗೆ ನೀರು ಪೂರೈಸಲು ನಿರಂತರ ವಿದ್ಯುತ್ ಬೇಕು. ದಿನಕ್ಕೆ ಹತ್ತಾರು ಬಾರಿ ವಿದ್ಯುತ್ ಕಟ್ ಹಾಗೂ ಹಲವು ಗಂಟೆಗಳ ವರೆಗೆ ವಿದ್ಯುತ್ ವ್ಯತ್ಯಯದಿಂದಾಗಿ ಆನಿಕೆರೆಯಿಂದ ನೀರು ಹರಿಸಲು ವಿಳಂಬವಾಗುತ್ತದೆ. ಒಂದು ಬಾರಿ ವಿದ್ಯುತ್ ನಿಂತರೆ ಮತ್ತೆ ವಿದ್ಯುತ್ ಬಂದಾಗಲೂ ನೀರನ್ನು ಆನಿಕರೆಯಿಂದ ಫಿಲ್ಟರ್ ಬೆಡ್‌ಗೆ ಹರಿಸಲು ಅರ್ಧ ಗಂಟೆಗೂ ಅಧಿಕ ಸಮಯಾವಕಾಶ ಬೇಕು. ಇದರಿಂದ ನೀರು ಸಂಗ್ರಹಕ್ಕೆ ತೊಂದರೆಯಾಗಿದೆ. ಅಲ್ಲದೆ ಫಿಲ್ಟರ್ ಬೆಡ್‌ನಲ್ಲಿಯೂ ವಿದ್ಯುತ್ ವ್ಯತ್ಯಯದಿಂದಾಗಿ ನೀರು ಶುದ್ಧೀಕರಣ ಹಾಗೂ ಮೇಲ್ಮಟ್ಟದ ಜಲಾಗಾರಕ್ಕೆ ನೀರು ಸಂಗ್ರಹಕ್ಕೆ ಅನನುಕೂಲವಾಗಿದೆ. ಒಂದು ದಿನ ನೀರಿನ ವ್ಯತ್ಯಾಸವಾದರೆ ಪಟ್ಟಣದಲ್ಲಿ ಎರಡು ಮೂರು ದಿನ ನೀರು ಬಿಡುವ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ. ನೀರು ಪೂರೈಕೆಗೆ ವ್ಯತ್ಯಯವಾಗದಂತೆ ಆನಿಕೆರೆ ಪಂಪ್ ಹೌಸ್‌ನಲ್ಲಿ ₹೨೫ ಲಕ್ಷ ವೆಚ್ಚದ ೭೫ ಎಚ್‌ಪಿ ಇನ್ನೊಂದು ಹೆಚ್ಚುವರಿ ಮೋಟರ್ ಕೂಡ ಅಳವಡಿಸಲಾಗಿದೆ. ಆದರೂ ಸರದಿಯಂತೆ ನೀರು ಪೂರೈಸಲು ಆಗುತ್ತಿಲ್ಲ.
ಈಗ ಇನ್ನಷ್ಟು ಬಿರು ಬೇಸಿಗೆ ಆರಂಭವಾಗಿದ್ದು, ಪುರಸಭೆ ಹಾಗೂ ಹೆಸ್ಕಾಂ ಒಟ್ಟಾಗಿ ಯೋಜಿಸಿ, ಯೋಚಿಸಿ ಹಾನಗಲ್ಲ ಪಟ್ಟಣಕ್ಕೆ ವಿಳಂಬವಿಲ್ಲದೆ ನೀರು ಪೂರೈಕೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಬಗೆಹರಿಯುವ ವಿಶ್ವಾಸವಿದೆ: ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ನೀರಿನ ಸಂಗ್ರಹವಿದೆ. ನಮಗೆ ಕುಡಿಯುವ ನೀರಿನ ಜಲಮೂಲಗಳಾದ ಆನಿಕರೆ ಹಾಗೂ ಧರ್ಮಾ ಜಲಾಶಯದಲ್ಲಿ ನೀರಿದೆ. ಆದರೆ ವಿದ್ಯುತ್ ವ್ಯತ್ಯಯವೇ ನೀರಿನ ಪೂರೈಕೆಗೆ ಆತಂಕವಾಗಿದೆ. ಈ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲಾಗಿದ್ದು, ಕೂಡಲೇ ಬಗೆಹರಿಯುವ ವಿಶ್ವಾಸವಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳುತ್ತಾರೆ.