- ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾದರೂ ಕಾರ್ಯಕರ್ತರಿಗೆ ಅಧಿಕಾರವಿಲ್ಲದ ನೋವು ನನಗಿದೆ: ಶಾಸಕ - - -
ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತಿಲ್ಲವೆಂಬ ನೋವು ಕಾರ್ಯಕರ್ತರಲ್ಲಿ ಇರುವಂತೆ ಸಹಜವಾಗಿಯೇ ನನಗೂ ಇದೆ. ದಯಮಾಡಿ ಈ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಮನವಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ನಿಗಮ ಮಂಡಳಿಗಳ ನಿರ್ದೇಶಕ ಸ್ಥಾನಗಳು ಇವೆ. ನಮ್ಮ ಸರ್ಕಾರ ಬಂದು ಮೂರೂವರೆ ವರ್ಷವಾಗುತ್ತಿದೆ. ಮೊದಲೇ ಆಯ್ಕೆಯಾಗಿದ್ದರೆ ಒಬ್ಬೊಬ್ಬರಿಗೆ ಒಂದೊಂದು ವರ್ಷ ಕೊಟ್ಟಿದ್ದರೂ ಒಂದು ಕ್ಷೇತ್ರದಲ್ಲಿ 15 ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬಹುದಾಗಿತ್ತು ಎಂದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಹಾಗೂ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ. ನಿಗಮ ಮಂಡಳಿ ನೇಮಕಾತಿ ಮಾಡುವ ಮೂಲಕ ನಮ್ಮ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮೊದಲು ಆಗಬೇಕು ಎಂದರು.
ಸಿಎಲ್‌ಪಿ ಸಭೆಯಲ್ಲಿ ಅರ್ಧದಷ್ಟು ಶಾಸಕರು ಸೋಲುತ್ತಾರೆಂಬ ಬಗ್ಗೆ ಚರ್ಚೆಯಾಗಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಸಿಎಲ್‌ಪಿ ಸಭೆಯಲ್ಲಿ ನಾನೂ ಇದ್ದೆ. ಇಡೀ ಸಭೆಯಲ್ಲಿ ಯಾವುದೇ ಶಾಸಕರು ಸೋಲುವ ಬಗ್ಗೆ ಚರ್ಚೆಯಾಗಿಲ್ಲ, ಯಾರೂ ಅದರ ಬಗ್ಗೆ ಮಾತನಾಡಿಲ್ಲ. ಕೆಲ ಶಾಸಕರಿಗೆ ಹಿನ್ನಡೆ ಇದೆ. ಸಹಜವಾಗಿ ವಿರೋಧಿ ಅಲೆ ಇರುತ್ತದೆ. ದೇವೇಗೌಡರು, ಡಿ.ಕೆ.ಶಿವಕುಮಾರ ಸಹ ಚುನಾವಣೆಗಳಲ್ಲಿ ಹಿಂದೆ ಸೋತಿದ್ದಾರೆ ಎಂದು ತಿಳಿಸಿದರು.
ಮುಂಬರುವ ಚುನಾವಣೆಗೆ ಕೋಟಿಗಟ್ಟಲೇ ದುಡ್ಡು ಬೇಕು. ಇದೆಲ್ಲಾ ಸಹಜ ಪ್ರಕ್ರಿಯೆ ಎಂಬಂತಾಗಿದೆ. ಇಷ್ಟು ಕೋಟಿ ದುಡ್ಡೇ ಬೇಕು ಅಂತಾ ನಂಬರ್ ಬೇಡ. ಸೋಲುತ್ತೇನೆಂದು ಗೊತ್ತಿರುವವರು ಯಾರಾದರೂ ನಾಮಿನೇಷನ್ ಮಾಡುತ್ತಾರಾ? ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡವರು ನಾಮಿನೇಷನ್ ಫೈಲ್ ಮಾಡುತ್ತಾರೆ ಎಂದು ಶಾಸಕ ಬಸವರಾಜ ಶಿವಗಂಗಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
(ಬಾಕ್ಸ್)
- ಶಾಮನೂರು ಕುಟುಂಬದ ಜೊತೆಗೆ ನಮ್ಮ, ಬಸವಂತಪ್ಪ ಬಾಂಧವ್ಯವಿದೆ: ಶಿವಗಂಗಾ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹಾಗೂ ಶಾಮನೂರು ಕುಟುಂಬ ಮಧ್ಯೆ ಅಣ್ಣ-ತಮ್ಮಂದಿರಗಿಂತ ಹೆಚ್ಚು ಬಾಂಧವ್ಯವಿದೆ. ಅದೇ ರೀತಿ ಬಾಂಧವ್ಯ ಕೆ.ಎಸ್. ಬಸವಂತಪ್ಪ ಅವರೂ ಹೊಂದಿದ್ದಾರೆ. ಸಚಿವ ಬಸವಂತಪ್ಪನವರ ಜೊತೆಗೆ ನಾವೂ ಆಪ್ತವಾಗಿರುತ್ತೇವೆ. ಕೈ ಮುಗಿಯುತ್ತೇವೆ, ಕಾಲಿಗೆ ಬೀಳುತ್ತೇವೆ ಎಂಬುದು ಸಹಜವಾಗಿ ಆಡಿರುವ ಮಾತುಗಳು. ಹಾಗೆ ಮಾತನಾಡುವುದು ಅವರವರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
- - -
-5ಕೆಡಿವಿಜಿ2, 3, 4: ಬಸವರಾಜ ವಿ. ಶಿವಗಂಗಾ