ಶಾಸಕರಾಗಿ ಸಚಿವರಾದ್ರೂ ಬದಲಾಗಲಿಲ್ಲ ಪ್ರಭು ಚವ್ಹಾಣ

KannadaprabhaNewsNetwork |  
Published : Jul 06, 2026, 01:15 AM IST
ಪೇಜ್‌-3 ಲೀಡ್‌ ಸ್ಟೋರಿ ಫೊಟೋಗಳು. | Kannada Prabha

ಸಾರಾಂಶ

ರಾಜಕೀಯದಲ್ಲಿ ಅದೆಷ್ಟು ಜನ ನೋಡಿಲ್ಲ. ಗ್ರಾಮ ಪಂಚಾಯತಿ ಸದಸ್ಯ ನಾದವನು ಚುನಾವಣೆ ನಂತರ ಅವನ ವೈಯಕ್ತಿಕ ಬದುಕನ್ನೇ ಬದಲಾಯಿಸಿಕೊಳ್ಳುತ್ತಾನೆ. ಜನರಿಂದ ಅಂತರ ಕಾಪಾಡಿಕೊಂಡು ವಿಐಪಿ ಕಲ್ಚರ್ ಗೆ ಮಾರು ಹೋಗ್ತಾನೆ. ದಿನ ಹೋಟೆಲ್ ನಲ್ಲಿ ಊಟ ಮಾಡೋದೇನು, ಮೋಜು ಮಸ್ತಿ ಉಡಾಯಿಸೋದೇನು

ದಯಾನಂದ ಘೂಳೆ

ಮುಖಂಡ, ಔರಾದ್

ರಾಜಕೀಯದಲ್ಲಿ ಅದೆಷ್ಟು ಜನ ನೋಡಿಲ್ಲ. ಗ್ರಾಮ ಪಂಚಾಯತಿ ಸದಸ್ಯ ನಾದವನು ಚುನಾವಣೆ ನಂತರ ಅವನ ವೈಯಕ್ತಿಕ ಬದುಕನ್ನೇ ಬದಲಾಯಿಸಿಕೊಳ್ಳುತ್ತಾನೆ. ಜನರಿಂದ ಅಂತರ ಕಾಪಾಡಿಕೊಂಡು ವಿಐಪಿ ಕಲ್ಚರ್ ಗೆ ಮಾರು ಹೋಗ್ತಾನೆ. ದಿನ ಹೋಟೆಲ್ ನಲ್ಲಿ ಊಟ ಮಾಡೋದೇನು, ಮೋಜು ಮಸ್ತಿ ಉಡಾಯಿಸೋದೇನು ... ಇಂಥ ಹಲವು ದಿಢೀರ್‌ ಬದಲಾವಣೆಗಳನ್ನು ಜನಪ್ರತಿನಿಧಿಗಳಲ್ಲಿ ನಾವು ಕಾಣುತ್ತೇವೆ. ಆದರೆ ಪ್ರಭು ಚವ್ಹಾಣ ಅವರು ಇದೆಲ್ಲದಕ್ಕೂ ತದ್ವಿರುದ್ಧವಾಗಿದ್ದಾರೆ. ಎಷ್ಟೇ ಅವಸರ ಇದ್ದರೂ ಮನೆ ಊಟ, ನೆಲದ ಮೇಲೆ ಕೂತು ಸಹಪಂಕ್ತಿ ಭೋಜನ ಮಾಡುವುದರಲ್ಲಿ ತುಂಬಾ ಆಸಕ್ತಿ. ಹೊಟೇಲ್ ಊಟ ಅನಿವಾರ್ಯ ಸಂದರ್ಭದಲ್ಲೂ ಮೋಜು ಮಸ್ತಿ ಇವರಿಗೆ ಆಗಿ ಬರೋಲ್ಲ. ಹಬ್ಬ ಹರಿದಿನಗಳಲ್ಲಿ ಸಂಭ್ರಮ, ಕಲೆ, ಜಾನಪದಕ್ಕೆ ಆದ್ಯತೆ. ಅವರು ಸಚಿವಾರಾದಾಗ್ಯೂ ಶಾಸಕರಿದ್ದಾಗಲೂ ಅವರ ಬದುಕಿನ ಸ್ಟೈಲ್ ನಲ್ಲಿ ಒಂದಿಷ್ಟೂ ಬದಲಾಗದ ಸರಳ, ಸಜ್ಜನಿಕೆ, ಸಹಬಾಳ್ವೆ, ಸಹೋದರತ್ವ, ಸಾಮರಸ್ಯದಿಂದ ಬದುಕುವ ರೀತಿ ಮೈ ಗೂಡಿಸಿಕೊಂಡಿದ್ದಾರೆ.

ಮನೆಯಲ್ಲಿ ಧರ್ಮಪತ್ನಿ ಸಕುಬಾಯಿ ಅವರು ಈಗಲೂ ನಸುಕಿನ ಜಾವ ಎದ್ದು ಊಟಕ್ಕೆ ಇಷ್ಟವಾದ ಕಡಲೆಕಾಯಿ ಕಾಳು ಪಲ್ಯ, ಮೇಂತಿ ಪಲ್ಯ, ಹೆಸರು ಕಾಳಿನ ಬೆಳೆ ಜತೆಯಲ್ಲಿ ಜೋಳದ ರೋಟ್ಟಿ ಅದು ಜತೆಯಲ್ಲಿರುವ 20 ಜನರಿಗಾಗುವಷ್ಟು ಬುತ್ತಿ ಕಟ್ಟಿಕೊಟ್ಟು ವ್ಯವಸ್ಥೆ ಮಾಡಿಕೊಡುವ ಪದ್ದತಿಯಿದೆ. ಶಾಸಕರು ಕ್ಷೇತ್ರದಲ್ಲಿ ಸುತ್ತಾಡುವಾಗಲೂ ಮನೆಯೂಟ ಮಾಡುವ ರೂಢಿ ಇದೆ. ಪ್ರವಾಸದಲ್ಲಿದ್ದಾಗಷ್ಟೇ ಮನೆ ಊಟ ನೆನಪಾಗೋದು ಇಂಥ ಪಕ್ಕಾ ದೇಶಿ ಸ್ಟೈಲ್ ನ ಬದುಕು ಮಾನ್ಯ ಪ್ರಭು ಚವ್ಹಾಣ ಅವರದ್ದು.

ಮಗ ಪ್ರತೀಕ ಚವ್ಹಾಣ ಕಾನೂನು ಪದವೀಧರರು. ತಂದೆಗೆ ತಕ್ಕ ಮಗನಾಗಿ ಅವರು ಕ್ಷೇತ್ರದಲ್ಲಿ ಸುತ್ತಾಡಿ ತಂದೆ ಪ್ರಭು ಚವ್ಹಾಣ ಅವರಿಗೆ ಸಾಥ್ ನೀಡಿದಲ್ಲದೆ. ಮಗಳಾದ ಪ್ರಿಯಾ ರಾಠೋಡ ಹಾಗೂ ಅಳಿಯ ಅಮಿತ್‌ ರಾಠೋಡ ಅವರ ಇಬ್ಬರು ಪುಟಾಣಿ ಕಂದಮ್ಮಗಳು ಶಾಸಕ ಪ್ರಭು ಚವ್ಹಾಣ ಅವರ ಜೀವದ ಜೀವಾಳುಗಳು.

ಹಬ್ಬಗಳನ್ನು ಸಾಕಷ್ಟು ವಿಜೃಂಭಿಸುವ ಪ್ರಭು ಚವ್ಹಾಣ ಅವರು ಅನ್ನದಾತರ ಪವಿತ್ರ ಹಬ್ಬ ಹೋಳಿ ಸಂದರ್ಭದಲ್ಲಿ ಪಶುಗಳ ಪೂಜೆ, ಹೋಳಿ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ, ಎಳ್ಳ ಅಮಾವಾಸ್ಯೆಗೆ ಗದ್ದೆಯಲ್ಲಿ ಲಕ್ಷ್ಮಿ ಪೂಜೆ ಮಾಡಿ ಜೋಕಾಲಿ ಆಡಿ, ಆಮಲಿ, ಬಜ್ಜಿ, ರೊಟ್ಟಿ, ಸವಿದು ಸಂಭ್ರಮ. ಕೃಷ್ಣ ಜನ್ಮಾಷ್ಟಮಿಗೆ ದಹಿ ಹಂಡಿ ಉತ್ಸವ, ವಿಜಯದಶಮಿಗೆ ತೋರಣ ಕಡಿಯುವ ಆಚರಣೆ, ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಹಂಚುವ ವಿಧಾನ, ರಕ್ಷಾ ಬಂಧನ ಬಂದಾಗ ಕ್ಷೇತ್ರದ ಸಹೋದರಿಯರಿಂದ ಅಣ್ಣನ ಸ್ಥಾನದಲ್ಲಿ ನಿಂತು ಹಬ್ಬದ ಆಚರಣೆ. ದೀಪಾವಳಿ ಬಂದಾಗ ಲಡ್ಡು, ಚುವಡಾ, ಚಕೋಲಿ ಮಾಡಿಸಿ ಊಟಕ್ಕೆ ಕರೆಯುವ ಪಾರಂಪರಿಕ ಪದ್ದತಿಯನ್ನು ಶಾಸಕ ಪ್ರಭು ಚವ್ಹಾಣ ಅವರು ಎಂದು ಮರೆತಿಲ್ಲ.

ಕುಸ್ತಿ ಪಂದ್ಯಾವಳಿಗಳ ಆಯೋಜನೆ ಮಾಡಿ ಅವಸಾನ ಅಂಚಿನಲ್ಲಿರುವ ದೇಶಿ ಕ್ರೀಡೆಯನ್ನು ಜೀವಂತವಾಗಿಡಲು ತಮ್ಮ ತಾಂಡದಲ್ಲಿ ಪ್ರತಿವರ್ಷ ನಡೆಯುವ ಜಗದಾಂಬ ಜಾತ್ರಾ ಮಹೋತ್ಸವದ ನಿಮಿತ್ತ ಕುಸ್ತಿ ಪಂದ್ಯಾವಳಿಯ ನೇತೃತ್ವ ವಹಿಸಕೊಳ್ತಾರೆ. ಆರಾಧ್ಯ ದೈವ ಶ್ರೀ ಉದ್ಭವಲಿಂಗ ಅಮರೇಶ್ವರ ಅವರ ಪಕ್ಕಾ ಅನುಯಾಯಿಯಾದ ಚವ್ಹಾಣ ಅವರು ಪ್ರತಿ ವರ್ಷ ಜಾತ್ರೆಯಲ್ಲಿ ಮುಂಚೂಣಿಯಲ್ಲಿರ್ತಾರೆ. ಪಾರಂಪರಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯ ಗಳಲ್ಲಿ ತನ್ನನ್ನು ತಾನು ಅಳವಡಿಸಿಕೊಂಡು ಮಾದರಿ ಬದುಕಿಗೂ ಸಾಕ್ಷಿಯಾಗಿದ್ದಾರೆ. ಇವರ ವಯಕ್ತಿಕ ಬದುಕಿನ ದಾರಿ ಸಮಸ್ತ ಜನರಿಗೂ ಮಾದರಿಯಾಗಿದೆ ಅನ್ನೋದಲ್ಲಿ ಎರಡು ಮಾತಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಹಕ ಸ್ನೇಹಿ ಸೇವೆಯೇ ಎಸ್‌ಬಿಐ ಯಶಸ್ಸಿನ ಗುಟ್ಟು
ಶೂ ವಿತರಣೆಯ ಹೊಣೆ ಶಿಕ್ಷಕರಿಗೆ ಬೇಡ