ಪ್ರಾಯೋಗಿಕವಾಗಿ ಮಾರುಕಟ್ಟೆ ಅವಶ್ಯಕತೆ ತಿಳಿದುಕೊಳ್ಳಿ: ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್

KannadaprabhaNewsNetwork | Published : Aug 24, 2024 1:17 AM

ಸಾರಾಂಶ

ಪ್ರಾಯೋಗಿಕವಾಗಿ ಮಾರುಕಟ್ಟೆಯ ಅವಶ್ಯಕತೆ ಅರಿತು, ನಾಯಕತ್ವ ಗುಣ, ಬಿಕ್ಕಟ್ಟು ನಿರ್ವಹಣೆ ಕಲಿಯಬೇಕು. ಜನರ ಬೇಡಿಕೆಯನ್ನು ಪೂರೈಸುವ ಉತ್ಪನ್ನಗಳನ್ನು ತಯಾರಿಸಬೇಕು ಎಂದು ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್ ಹೇಳಿದರು. ತುಮಕೂರಲ್ಲಿ ಉದ್ಯಮಶೀಲತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಉದ್ಯಮಶೀಲತಾ ಸಪ್ತಾಹಕನ್ನಡಪ್ರಭ ವಾರ್ತೆ ತುಮಕೂರುಪ್ರಾಯೋಗಿಕವಾಗಿ ಮಾರುಕಟ್ಟೆಯ ಅವಶ್ಯಕತೆ ಅರಿತು, ನಾಯಕತ್ವ ಗುಣ, ಬಿಕ್ಕಟ್ಟು ನಿರ್ವಹಣೆ ಕಲಿಯಬೇಕು. ಜನರ ಬೇಡಿಕೆಯನ್ನು ಪೂರೈಸುವ ಉತ್ಪನ್ನಗಳನ್ನು ತಯಾರಿಸಬೇಕು ಎಂದು ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಒಂದು ವಾರದ ಉದ್ಯಮಶೀಲತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ನಮ್ಮ ಉತ್ಪನ್ನವನ್ನು ಜನರ ಬೇಡಿಕೆಗಳಿಗೆ ಅನುಗುಣವಾಗಿ ಪರಿಚಯಿಸಬೇಕು. ಉತ್ಪನ್ನದ ಗುಣಮಟ್ಟ, ಮೌಲ್ಯ, ರಚನೆ- ಎಲ್ಲವನ್ನೂ ಪರೀಕ್ಷಿಸಿ, ಖರೀದಿಸುತ್ತಾರೆ. ಜನರ ನಾಡಿಮಿಡಿತ ಅರಿತ ಸಂಶೋಧನೆ ಆಧಾರಿತ ಉತ್ಪನ್ನಕ್ಕೆ ಬೆಲೆ ಹೆಚ್ಚು ಎಂದರು.

ನೇಚರ್ ಬೇಸ್ಡ್ ಹೆಲ್ತ್ ಸಪ್ಲಿಮೆಂಟ್ಸ್ ಸಿಇಒ ಮಹೇಶ್‌ ಆರ್. ವಿ. ಮಾತನಾಡಿ, ಜನರ ಬೇಡಿಕೆಗಳನ್ನು ಈಡೇರಿಸುವ, ಉದ್ಯಮಿಯ ಬದುಕನ್ನು ಬದಲಿಸುವ ಒಂದು ಹೊಸ ವಿಭಿನ್ನ ಕಲ್ಪನೆಯ ಪ್ರಯೋಗದಿಂದ ಬಂಡವಾಳ, ಮೂಲಭೂತ ಸೌಕರ್ಯ, ಸಂಪನ್ಮೂಲ, ತಂತ್ರಜ್ಞಾನ, ಮಾನವ ಬಲ- ಎಲ್ಲವೂ ತಾನಾಗಿಯೇ ಬರುತ್ತವೆ ಎಂದು ತಿಳಿಸಿದರು.ಮಾರುಕಟ್ಟೆಯ ಬೇಡಿಕೆಗಳು, ಸಮಸ್ಯೆಗಳನ್ನು ಸಂಶೋಧನೆ ನಡೆಸಿ, ಅದಕ್ಕೆ ಪೂರಕವಾಗಿ ಉತ್ಪನ್ನಗಳನ್ನು ತಯಾರಿಸಿದಾಗ ಅಲ್ಲೊಂದು ಉದ್ಯಮ ಶುರುವಾಗುತ್ತದೆ. ವಿದೇಶಿ ಉದ್ಯಮಗಳು ಭಾರತೀಯ ಮಾರುಕಟ್ಟೆಯ ಬೇಡಿಕೆಗಳನ್ನು ಸಂಶೋಧನೆ ನಡೆಸಿ, ಲಕ್ಷ ಬಂಡವಾಳ ಹೂಡಿ ಲಕ್ಷಕೋಟಿ ಸಂಪಾದಿಸುತ್ತಿದ್ದಾರೆ. ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಭಾರತೀಯರು ಲಕ್ಷ ಸಂಬಳಕ್ಕಾಗಿ ವಿದೇಶಕ್ಕೆ ತೆರೆಳಲು ಹಂಬಲಿಸುತ್ತಾರೆ ಎಂದರು.ವಿವಿಯ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ನೂರ್‌ಅಫ್ಜಾ ಮಾತನಾಡಿ, ವಿದ್ಯಾರ್ಥಿಗಳನ್ನು ವ್ಯವಹಾರ ಆಡಳಿತ, ವ್ಯಾಪಾರ, ವಾಣಿಜ್ಯೋದ್ಯಮ, ಸ್ವಯಂ ಉದ್ಯೋಗದಲ್ಲಿ ಪ್ರಾಯೋಗಿಕವಾಗಿ ತಯಾರಾಗುವಂತೆ ಮಾಡಲು ಈ ಸಪ್ತಾಹದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ. ಮೋಹನ್‌ರಾಮ್, ಉಪನ್ಯಾಸಕಿ ಇಂಪಾ ಉಪಸ್ಥಿತರಿದ್ದರು.

Share this article