ಪಠ್ಯ ಪುಸ್ತಕಗಳ ಜೊತೆಗೆ ಪಠ್ಯೇತರ ಚಟುವಟಿಕೆ, ಸಾಮಾನ್ಯ ಜ್ಞಾನವನ್ನು ಹೊಂದಬೇಕು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು.
ಹರಪನಹಳ್ಳಿ: ಪೋಷಕರ ಆಶಯಕ್ಕೆ ದಕ್ಕೆ ಆಗದಂತೆ ಅಭ್ಯಸಿಸಿ ಸಾಧನೆ ಮಾಡಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅವರು ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನದಿಂದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಸೋಮವಾರ ಮಾತನಾಡಿದರು.
ಪಠ್ಯ ಪುಸ್ತಕಗಳ ಜೊತೆಗೆ ಪಠ್ಯೇತರ ಚಟುವಟಿಕೆ, ಸಾಮಾನ್ಯ ಜ್ಞಾನವನ್ನು ಹೊಂದಬೇಕು. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ದಿನಪತ್ರಿಕೆಗಳನ್ನು ಪ್ರತಿದಿನ ಓದಿ, ಉತ್ತಮ ಅಭಿರುಚಿ ರೂಡಿಸಿಕೊಳ್ಳಬೇಕು. ಎಲ್ಲರೂ ಎಂಜಿನಿಯರ್ ಹಾಗೂ ಮೆಡಿಕಲ್ ಓದಬೇಕು ಎಂಬ ಗುರಿ ಇಡಬೇಡಿ. ಇತರ ಪದವಿ ಗಳನ್ನು ಪಡೆದು ಕೆಎಎಸ್, ಐಎಎಸ್ ಗಳನ್ನು ಪಾಸ್ ಮಾಡಿ ಸಾಧನೆ ಮಾಡಬಹುದು ಎಂದರು.
ಸಂಸ್ಕಾರ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿ ರೂಪಗೊಳ್ಳುತ್ತದೆ. ತಂದೆ, ತಾಯಿ ಗುರುಗಳಿಗೆ ಗೌರವ ನೀಡಬೇಕು. ಒಟ್ಟಿನಲ್ಲಿ ದೇವರನ್ನು ಪೋಷಕರಲ್ಲಿ ಕಾಣಬೇಕು ಎಂದರು.
ಕಳೆದ ಐದು ವರ್ಷಗಳ ಹಿಂದೆ ಎಂ.ಪಿ. ರವೀಂದ್ರ ಪ್ರತಿಷ್ಠಾನ ಸ್ಥಾಪಿಸಿ ಅದರ ಮೂಲಕ ಪ್ರತಿಭಾ ಪುರಸ್ಕಾರ, ಸಂಕ್ರಾಂತಿ ಸಂಭ್ರಮ, ಸಂಸ್ಕೃತಿ ಪರಿಚಯ ಮುಂತಾದ ಸಾಹಿತ್ಯ, ಸಾಂಸ್ಕೃತಿಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಅವರು ಹೇಳಿದರು.
ನಾನು ಜೀವಂತ ಇರುವವರೆಗೂ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತೇನೆ ಎಂದು ಶಾಸಕರು ಹೇಳಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಯಶಸ್ಸು ಸುಮ್ಮನೆ ಬರುವುದಿಲ್ಲ. ಅದಕ್ಕೊಂದು ಸಾಧನೆ ಇರುತ್ತದೆ. ಸಂವಿಧಾನ ನಿಮ್ಮ ಧರ್ಮ ಗ್ರಂಥವಾಗಲಿ ಎಂದ ಅವರು, ಮಕ್ಕಳು ಎಲ್ಲಿಯವರೆಗೂ ಓದುತ್ತಾರೋ ಅಲ್ಲಿಯವರೆಗೂ ಓದಿಸಿ ಎಂದು ಪೋಷಕರಿಗೆ ತಿಳಿಸಿದರು.
ತಿಮ್ಮಣ್ಣ ಮತ್ತು ಸಂಗಡಿಗರಿಂದ ವಚನ ಗಾಯನ ಜರುಗಿತು. ಅಂದಾಜು 300 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಉದ್ದಾರ ಗಣೇಶ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ, ಕವಿತಾ ಸುರೇಶ, ಉಮಾ, ಉದಯಶಂಕರ, ಮತ್ತೂರು ಬಸವರಾಜ, ಶಿವರಾಜ, ಸಾಸ್ವಿಹಳ್ಳಿ ನಾಗರಾಜ, ಎಲ್.ಮಂಜನಾಯ್ಕ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.