ಜೈನ ಸಿದ್ಧಾಂತದ ದಶಧರ್ಮಗಳ ಆಚರಣೆ ಕರ್ತವ್ಯವಾಗಬೇಕು: ಡಾ. ಮೋಹನ್‌ ಆಳ್ವ

KannadaprabhaNewsNetwork |  
Published : Feb 24, 2024, 02:31 AM IST
11 | Kannada Prabha

ಸಾರಾಂಶ

ಮಹಾಮಸ್ತಕಾಭಿಷೇಕದ ಎರಡನೇ ದಿನವಾದ ಶುಕ್ರವಾರ ನಿತ್ಯ ವಿಧಿ ಸಹಿತ ಮೃತ್ತಿಕ ಸಂಗ್ರಹಣ, ಅಂಕುರಾರ್ಪಣೆ,ಪಂಚ ಕಲ್ಯಾಣ ಮಂಟಪ ಪ್ರವೇಶ, ಯಕ್ಷರಾಧನಾ ಪೂರ್ವಕ ಯಕ್ಷ ಪ್ರತಿಷ್ಠೆ, ಮಧ್ಯಾಹ್ನ ಧ್ವಜಾರೋಹಣ ಸಂಜೆ ಬ್ರಹ್ಮಸ್ಥಂಭದ ಬ್ರಹ್ಮ ಯಕ್ಷ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ ಸಹಿತ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಹಾಗೂ ಇನ್ನಿತರ ವೈದಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಜೈನ ಸಿದ್ಧಾಂತದ ದಶಧರ್ಮಗಳನ್ನು ನಿತ್ಯಜೀವನದಲ್ಲಿ ಆಚರಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕು ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಅವರು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಎರಡನೇ ದಿನವಾದ ಶುಕ್ರವಾರದಂದು ನಡೆದ ಧಾರ್ಮಿಕ‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಚಾರದಲ್ಲಿ ಅಹಿಂಸೆ, ವಿಚಾರದಲ್ಲಿ ಅನೇಕಾಂತವಾದವನ್ನು ಜೈನ ಧರ್ಮದಲ್ಲಿ‌ ಮಾತ್ರ ಕಾಣಲು ಸಾಧ್ಯ. ಈ ಸಿದ್ಧಾಂತದಿಂದಾಗಿಯೇ ಜೈನರು ಶಾಂತಿಪ್ರಿಯರಾಗಿದ್ದಾರೆ. ಹಿಂಸೆಯನ್ನು ಹಿಂಸೆಯಿಂದ ಸರಿ ಮಾಡಲು ಸಾಧ್ಯವಿಲ್ಲ. ಜೈನ ಸಿದ್ಧಾಂತವನ್ನು ಸೂರ್ಯ-ಚಂದ್ರ ಇರುವವರೆಗೆ ಉಳಿಸಬೇಕಾದ ಅಗತ್ಯ ಇದೆ ಎಂದರು.

ನರಸಿಂಹರಾಜ ಪುರ ಜೈನ ಮಠದ ಡಾ. ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು, ಅಭಿಷೇಕ ಮಾಡುವ ಪ್ರತಿಯೊಬ್ಬರೂ ಇಂದ್ರರು, ಇಂದ್ರಾಣಿಯವರೇ ಆಗುತ್ತಾರೆ. ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಲೋಕಕಲ್ಯಾಣಕ್ಕಾಗಿಯೇ ಹೊರತು ಯಾರದೇ ಸ್ವಾರ್ಥಕ್ಕಲ್ಲ. ಬಾಹುಬಲಿಯ ಎದುರು ನಿಂತರೆ ಸುಂದರತೆಯ ಅನುಭವ ಉಂಟಾಗುತ್ತದೆ. ವಿಶ್ವಕ್ಕೆ ಶಾಂತಿ ಬಯಸುವ ನಾವು ಪ್ರತಿಯೊಬ್ಬರೂ ಅಭಿಷೇಕದಲ್ಲಿ ಪಾಲ್ಗೊಳ್ಳಬೇಕು ಎಂದು ಆಶೀರ್ವದಿಸಿದರು.

ಮೂಡುಬಿದಿರೆ ಜೈನಮಠದ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರು, ಅಭಿಷೇಕದಿಂದ ಚಂಚಲತೆ ನಿವಾರಣೆಯಾಗಿ ಏಕಾಗ್ರತೆ ಬರುತ್ತದೆ. ಶಾಂತರಸಕ್ಕೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಭಕ್ತಿರಸದೊಂದಿಗೆ ಮುಕ್ತಿಯಕಡೆಗೆ ಹೋಗೋಣ ಎಂದು ಆಶೀರ್ವದಿಸಿದರು.

ಆರಂಭದಲ್ಲಿ ಮೂಡುಬಿದಿರೆ ಎಕ್ಸಲೆಂಟ್‌ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ. ಸಂಪತ್ ಕುಮಾರ್ ಅವರು ಕನ್ನಡ ಕವಿಗಳು ಕಂಡ ಬಾಹುಬಲಿಯ ಚಿತ್ರಣವನ್ನು ಉಪನ್ಯಾಸದ ಮೂಲಕ ನೀಡಿದರು. ಯುಗಳ ಮುನಿಶ್ರೀಗಳಾದ ಶ್ರೀ ಅಮೋಘಕೀರ್ತಿ ಹಾಗೂ ಶ್ರೀ ಅಮರಕೀರ್ತಿ ಮಹಾರಾಜರು, ಮುಕ್ತಿಶ್ರೀ ಮಾತಾಜಿ, ವಿದ್ಯಾಶ್ರೀ ಮಾತಾಜಿಯವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಪದ್ಮಪ್ರಸಾದ ಅಜಿಲ, ಮಂಗಳೂರಿನ ಎಂ.ಆರ್.ಪಿ.ಎಲ್.ನ ಸ್ವಾಮಿ ಪ್ರಸಾದ್, ದಾನಿಗಳಾದ ದೇವಕುಮಾರ್ ಕಂಬಳಿ ದುಬೈ, ತುಮಕೂರಿನ ಜಿ.ಎಸ್., ಅಶ್ವಿನಿ ಕುಮಾರಿ ಇಂದ್ರ ಇದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣಕುಮಾರ್ ಇಂದ್ರ ಸ್ವಾಗತಿಸಿದರು. ಸತ್ಯಪ್ರಭಾ ಜೈನ್ ವಂದಿಸಿದರು. ಶುಭಶ್ರೀ ಜೈನ್ ಕಾರ್ಯಕ್ರಮ‌ ನಿರ್ವಹಿಸಿದರು. ಬೆಳಗ್ಗೆ ಬೆಳ್ತಂಗಡಿ, ಮಂಗಳೂರು, ಶಿರ್ಲಾಲು ಜೈನ್ ಮಿಲನ್ ಸದಸ್ಯರಿಂದ ಜಿನ ಭಜನೆ ನಡೆಯಿತು.

ಸಂಜೆ ಮುಖ್ಯವೇದಿಕೆಯಲ್ಲಿ ನವೀನ್ ಜಾಂಬ್ಳೆ ಇವರಿಂದ ಸುಗಮಸಂಗೀತ, ಬಳಿಕ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಿತು. ವಸ್ತುಪ್ರದರ್ಶನ ವೇದಿಕೆಯಲ್ಲಿ ರಸಮಂಜರಿ‌, ನೃತ್ಯಾಂಜಲಿ ಪ್ರದರ್ಶನಗೊಂಡಿತು.

ಮಹಾಮಸ್ತಕಾಭಿಷೇಕದ ಎರಡನೇ ದಿನವಾದ ಶುಕ್ರವಾರ ನಿತ್ಯ ವಿಧಿ ಸಹಿತ ಮೃತ್ತಿಕ ಸಂಗ್ರಹಣ, ಅಂಕುರಾರ್ಪಣೆ,ಪಂಚ ಕಲ್ಯಾಣ ಮಂಟಪ ಪ್ರವೇಶ, ಯಕ್ಷರಾಧನಾ ಪೂರ್ವಕ ಯಕ್ಷ ಪ್ರತಿಷ್ಠೆ, ಮಧ್ಯಾಹ್ನ ಧ್ವಜಾರೋಹಣ ಸಂಜೆ ಬ್ರಹ್ಮಸ್ಥಂಭದ ಬ್ರಹ್ಮ ಯಕ್ಷ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ ಸಹಿತ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಹಾಗೂ ಇನ್ನಿತರ ವೈದಿಕ ಕಾರ್ಯಕ್ರಮಗಳು ನಡೆದವು.

ಹೆಲಿಕಾಪ್ಟರ್‌ನಲ್ಲಿ ಬಾಹುಬಲಿಗೆ ಪುಷ್ಪವೃಷ್ಟಿ

ಬೆಳ್ತಂಗಡಿ: ವೇಣೂರಿನಲ್ಲಿ ಶುಕ್ರವಾರ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಸೇವಾಕತೃಗಳಾದ ವೇಣೂರಿನ ಪ್ರವೀಣ್ ಕುಮಾರ್ ಇಂದ್ರ ಮತ್ತು ಅಶ್ವಿನಿಕುಮಾರಿ ಹಾಗೂ ಮಕ್ಕಳಾದ ಸತ್ಯಪ್ರಸಾದ್, ಸತ್ಯಶ್ರೀ, ಸತ್ಯಪ್ರಭಾ ಮತ್ತು ವಿಶ್ವೈನ್ ಹಾಗೂ ಕುಟುಂಬಸ್ಥರ ವತಿಯಿಂದ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಯಿತು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಕಣ್ತುಂಬಿಕೊಂಡು ಬಾಹುಬಲಿ ಸ್ವಾಮಿಗೆ ಜೈಕಾರ ಹಾಕಿದರು. ಯುಗಳಮುನಿಗಳೂ ಪುಷ್ಪವೃಷ್ಟಿ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

ಇಂದಿನ ಕಾರ್ಯಕ್ರಮಗಳು

ಫೆ.24ರಂದು ಶನಿವಾರ ಬೆಳಗ್ಗೆ ನಿತ್ಯವಿಧಿ ಸಹಿತ ಶ್ರೀ ಪೀಠ ಯಂತ್ರರಾಧನಾ ವಿಧಾನ, ಧ್ವಜ ಪೂಜೆ ಶ್ರೀ ಬಲಿ ವಿಧಾನ,ಮಧ್ಯಾಹ್ನ ಭಕ್ತಾಮರ ಯಂತ್ರಾರಾಧನ ವಿಧಾನ,ಅಗ್ರೋದಕ ಮೆರವಣಿಗೆ ಬಳಿಕ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹಾಪೂಜೆ ಹಾಗೂ ಮಂಗಳಾರತಿ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.

ಮಧ್ಯಾಹ್ನ 3 ಗಂಟೆಗೆ ಯುಗಳ ಮುನಿಗಳ ಆಶೀರ್ವಚನದೊಂದಿಗೆ ಸ್ಪೀಕರ್ ಯು‌.ಟಿ‌. ಖಾದರ್‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಮಂಜುನಾಥ ಭಂಡಾರಿ, ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್, ಎಸ್‌ಪಿಸಿಎಲ್‌ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಜಿನೇಂದ್ರ ಕಣಗಾವಿ, ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಭಾಗವಹಿಸಲಿರುವರು. ಜಿನ ಸಿದ್ಧಾಂತದ ಶ್ರೇಷ್ಠತೆ-ಅನೇಕಾಂತವಾದದ ಕುರಿತು ಅಜಿತ್ ಹನುಮಕ್ಕನವರ್ ಉಪನ್ಯಾಸ ನೀಡಲಿರುವರು. ಸಂಜೆ ಅಜಯ್ ವಾರಿಯರ್ ಮತ್ತು ಬಳಗದವರಿಂದ ಸಂಗೀತಯಾನ, ಭರತನಾಟ್ಯ, ನೃತ್ಯ ಸಂಗಮ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ