ಏಕಾಗ್ರತೆಯಿಂದ ಅಭ್ಯಾಸ ನಡೆಸಿ ಉನ್ನತ ಸ್ಥಾನಮಾನ ಅಲಂಕರಿಸಿ

KannadaprabhaNewsNetwork |  
Published : Dec 08, 2024, 01:15 AM IST
ಪಟ್ಟಣದ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ  2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಎನ್.ಎಸ್.ಎಸ್, ರೆಡ್ ಕ್ರಾಸ್ ರೋವರ್ಸ ಅಂಡ್ ರೇಂಜರ್ಸ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಬಸವರಾಜ ವಿ.ಶಿವಗಂಗಾ | Kannada Prabha

ಸಾರಾಂಶ

ಚನ್ನಗಿರಿಯ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ 2024- 2025ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಎನ್.ಎಸ್.ಎಸ್, ರೆಡ್ ಕ್ರಾಸ್ ರೋವರ್ಸ್ ಅಂಡ್ ರೇಂಜರ್ಸ್ ಚಟುವಟಿಕೆಗಳ ಉದ್ಘಾಟನೆಯನ್ನು ಶಾಸಕ ಬಸವರಾಜ ವಿ.ಶಿವಗಂಗಾ ನೆರವೇರಿಸಿದರು.

ಕನ್ನಡಪ್ರಭವಾರ್ತೆ ಚನ್ನಗಿರಿ

ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳುವ ಹಂತ ಇದಾಗಿದ್ದು, ಈ ಸಮಯದಲ್ಲಿ ಯಾವ ವಿಚಾರಕ್ಕೂ ವಿಚಲಿತರಾಗದೆ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಉನ್ನತ ಸ್ಥಾನ ಮಾನಗಳನ್ನು ಅಲಂಕರಿಸಬಹುದಾಗಿದೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.

ಪಟ್ಟಣದ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ 2024- 2025ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಎನ್.ಎಸ್.ಎಸ್, ರೆಡ್ ಕ್ರಾಸ್ ರೋವರ್ಸ್ ಅಂಡ್ ರೇಂಜರ್ಸ್ ಚಟುವಟಿಕೆಗಳ ಉದ್ಘಾಟನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಿಮ್ಮ ಕನಸುಗಳ ಸಾಕಾರಗೊಳಿಸುವ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಉನ್ನತ ಸ್ಥಾನ ಮಾನಗಳನ್ನು ಅಲಂಕರಿಸಿದಾಗ ಮಾತ್ರ ನೀವು ಓದಿದ ಕಾಲೇಜಿಗೂ, ನಿಮ್ಮ ತಂದೆ-ತಾಯಿಗಳಿಗೂ ಉತ್ತಮ ಹೆಸರು ಬರಲಿದೆ ಎಂದರು.

ಅಧಿಕಾರದ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಉದ್ದೇಶ ಹೊಂದಿದ್ದೇನೆ. ಅದರಂತೆ ಕ್ಷೇತ್ರದ ಆಯ್ದ ಪ್ರೌಢಶಾಲೆಗಳಲ್ಲಿ ಕಳೆದ ವರ್ಷ ರಾತ್ರಿ ತರಗತಿಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದೆ. ಅದರಂತೆ ರಾತ್ರಿ ಶಾಲೆಗಳು ನಡೆದ ಎಲ್ಲ ಶಾಲೆಗಳಲ್ಲಿಯೂ ಉತ್ತಮ ಫಲಿತಾಂಶ ಬಂದಿದೆ. ಪ್ರಸ್ತುತ ವರ್ಷದಲ್ಲಿ ಕ್ಷೇತ್ರದ ಎಲ್ಲ ಶಾಲೆಗಳಲ್ಲಿಯೂ ರಾತ್ರಿ ಶಾಲೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸ್ಯಾಮ್ ವರ್ಗೀಸ್ ಮಾತನಾಡಿ, ಕಠಿಣ ಪರಿಶ್ರಮ, ಸತತ ಅಭ್ಯಾಸ ಇದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗಲಿದ್ದು, ನಾನು 2014ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಅನುತೀರ್ಣಗೊಂಡೆ. ಅನಂತರ ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡೆ ಎಂದು ತಮ್ಮ ಯಶಸ್ಸಿನ ದಿನಗಳನ್ನು ನೆನಪಿಸಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಜಿ. ಅಮೃತೇಶ್ವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿರುತೆರೆ ನಟಿ ಬಿಂದು ಹೊನ್ನಾಳಿ, ಸಹಾಯಕ ಪ್ರಾಧ್ಯಾಪಕರಾದ ಷಣ್ಮುಖಪ್ಪ, ಪ್ರದೀಪ್ ಕುಮಾರ್, ಪ್ರಸನ್ನ, ಸುರೇಶ್, ಸುಪ್ರಿಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ವೈ. ರವಿಕುಮಾರ್, ಜೆ.ಎಸ್. ಜ್ಯೋತಿಪ್ರಸಾದ್, ಎಂ.ಆರ್. ಶಿವರಾಜ್, ಸಿ. ರಮೇಶ್, ಎಸ್.ಎಸ್. ಮಧುಕುಮಾರ್, ವಿದ್ಯಾರ್ಥಿಗಳು ಹಾಜರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ