ಹಾವೇರಿ: ಭಾರತದ ಸಂವಿಧಾನ ಅನುಷ್ಠಾನ ಮತ್ತು ವಚನಗಳ ಅನುಷ್ಠಾನ ಬೇರೆ ಬೇರೆ ಅಲ್ಲ, ಸಂವಿಧಾನ ಓದಿದರೆ ವಚನಗಳನ್ನು ಓದಿದಂತೆ, ವಚನಗಳನ್ನು ಅಭ್ಯಸಿಸಿದರೆ ಸಂವಿಧಾನ ಅಭ್ಯಸಿಸಿದಂತೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಅಂದಿನ ಸಮಾಜದಲ್ಲಿ ತುಂಬಿದ್ದ ಜಾತಿಯ ವಿಷಮತೆ, ಅರ್ಥಹೀನ ಆಚಾರ-ವಿಚಾರಗಳನ್ನು ಧೈರ್ಯದಿಂದ ಖಡಾಖಂಡಿತವಾಗಿ ನಿಷ್ಠುರವಾಗಿ ಟೀಕಿಸಿ ಜೀವನದ ಆದರ್ಶಗಳನ್ನು ಎತ್ತಿ ಹಿಡಿದವರು ವಚನಕಾರ್ತಿಯರು. ಅವರು ಸರಳವಾಗಿ, ಸ್ಪಷ್ಟವಾಗಿ ತಮ್ಮ ವಚನಗಳಲ್ಲಿ ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸಿರುವರು. ಮಾನವೀಯತೆಯೇ ಧರ್ಮವೆಂದು ಸಾರಿದವರು ಎಂದರು.
ವೇದಿಕೆಯ ಉಪಾಧ್ಯಕ್ಷೆ ಅಮೃತಮ್ಮ ಶೀಲವಂತರ ವಚನ ವಿಶ್ಲೇಷಣೆ ಮಾಡಿದರು. ವೇದಿಕೆಯ ಜಿಲ್ಲಾಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳು ಗ್ರಂಥಸ್ಥವಾಗದೆ ಹೃದಯಸ್ಥವಾಗಬೇಕು. ವಚನಗಳು ಪಚನವಾಗಬೇಕು. ಮಕ್ಕಳಲ್ಲಿ ವಚನ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವುದು ಅಗತ್ಯವಾಗಿದೆ. ಕದಳಿ ವೇದಿಕೆಗೆ ಬೆಳ್ಳಿಹಬ್ಬದ ಸಂಭ್ರಮ ಬರುವ ದಿನಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸರ್ವರೂ ಕೈಜೋಡಿಸಬೇಕು ಎಂದರು.ಅಕ್ಕನ ಬಳಗದ ಅಧ್ಯಕ್ಷೆ ಅಕ್ಕಮ್ಮ ಭರತನೂರಮಠ ಮಾತನಾಡಿದರು. ರೇಣುಕಾ ಮಡಿವಾಳರ ಬಸವಣ್ಣೆಮ್ಮ ವಚನಗಳನ್ನು ಹಾಡಿದರು. ಬೆಂಗಳೂರಿನ ನಾದಬಿಂದು ಸಂಗೀತ ಶಾಲೆಯ ಸಂಸ್ಥಾಪಕಿ ನೀಲಲೋಚನಾ ಶೀಲವಂತರ ವಚನ ಗಾಯನ ಗಮನ ಸೆಳೆಯಿತು. ಲೇಖಕಿ ಲೀಲಾವತಿ ಪಾಟೀಲ್, ಲಲಿತಾ ಅಂಕಲಕೋಟಿ, ಶಾಂತಕ್ಕ ಮಡಿವಾಳರ, ಜ್ಯೋತಿ ಕಾಟೇನಹಳ್ಳಿ ಹಾಗೂ ಲಕ್ಕಣ್ಣವರ್ ಸಹೋದರಿಯರು ಇದ್ದರು.
ಶೋಭಾ ಮುಂಡರಗಿ ಸ್ವಾಗತಿಸಿದರು. ಗೌರವಾಧ್ಯಕ್ಷೆ ಲಲಿತಕ್ಕ ಹೊರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾ ಮಾಗನೂರ್ ಕಾರ್ಯಕ್ರಮ ನಿರೂಪಿಸಿದರು. ಹೇಮಕ್ಕ ಮುದ್ದಿ ವಂದಿಸಿದರು.