ಕನ್ನಡಪ್ರಭ ವಾರ್ತೆ ಕಲಬುರಗಿ
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಸಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಸ್ಥಳೀಯ ಕಾಂಗ್ರೆಸ್ಸಿಗರು ನಾವು ಸಣ್ಣ ಪ್ರಶ್ನೆ ಕೇಳಿ ಅಭಿವೃದ್ಧಿಯನ್ನು ಕುರಿತು ಚರ್ಚೆಗೆ ಮುಂದಾದರೆ ನಮ್ಮ ಮೇಲೆಯೇ ಎಗರಿ ಬೀಳಲು ಯತ್ನಿಸುತ್ತಿದ್ದಾರೆ. ಮತದಾರರಿಗೆ ಪ್ರಗತಿ ವಿಚಾರ ತಿಳಿಸಿರಿ ಎಂದರೆ ಬಾಡಿಗೆ ವಾಹನಕ್ಕೆ ಪ್ರಗತಿ ರಥ ಎಂದು ಅಂಟಿಸಿ ನಮ್ಮ ಕಚೇರಿ ಮುಂದೆ ನಿಲ್ಲಿಸಿದ್ದಾರೆ. ಇದನ್ನು ಕಂಡು ಕಲಬುರಗಿ ಜನತೆಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲವೆಂದು ಅವರು ವ್ಯಂಗ್ಯವಾಡಿದ್ದಾರೆ.
ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿಗೆ 1 ಸಾವಿರ ರುಪಾಯಿ ಕೊಟ್ಟಿರೋದನ್ನೆ ದೊಡ್ಡದು ಮಾಡುತ್ತಿದ್ದಾರೆ. ರಾಜ್ಯಕ್ಕೆ 5 ವಂದೇ ಬಾರತ ರೈಲು ಕೊಟ್ಟಿದ್ದಾರೆ. ಟೈಕ್ಸಟೈಲ್ ಪಾರ್ಕ್ ಕೊಟ್ಟಿದ್ದಾರೆ. ಇನ್ನೂ ಅನೇಕ ಯೋಜನೆ ನೀಡಿದ್ದಾರೆ. ಆದರೆ ಇವನ್ನೆಲ್ಲ ಬಿಟ್ಟು ಇರಿಗೆ ಚಿಲ್ಲರೆ ಸಮಸ್ಯೆಗಳೇ ಕಾಡುತ್ತಿವೆ ಎಂದರು.ಗ್ರಾಮೀಣ ಕಲಬುರಗಿ ಹಾಗೂ ಚಿಂಚೋಳಿಗೆ ಹಣ ತಂದು ನಾವೇ ಬಿಜೆಪಿ ಸರಕಾರದಲ್ಲಿ ಪ್ರಗತಿ ಮಾಡಿದ್ದಾಗಿದೆ. ಈಗಂತೂ ಹೊಸ ಶಾಸಕರ ಕ್ಷೇತ್ರಗಳಗೆ ಅನುದಾನವೇ ನಯಾಪೈಸೆ ನೀಡಿಲ್ಲವೆಂದರು. ಸುಮ್ಮನೆ ಹಣ ಬಂದಿದೆ, ಪ್ರಗತಿಯಾಗಿದೆ ಎಂದು ಹೇಳುತ್ತಿದ್ದಾರೆ. ಎಲ್ಲವೂ ಸುಳ್ಳು, ಬಿಜೆಪಿಯ ಯೋಜನೆಗಳೇ ಇವರು ಉದ್ಘಾಟಿಸುತ್ತಿದ್ದಾರೆಂದರು.