ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರೂ ದೇಶಕಂಡ ಅಪ್ರತಿಮ ಚೈತನ್ಯ. ಇಬ್ಬರೂ ಸ್ವಚ್ಛತೆಯ ವಿಭಿನ್ನ ಮಾದರಿಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರು ರಾಜಕೀಯ ಕ್ಷೇತ್ರದಿಂದ ಹೊರಗುಳಿದು, ದೇಶದ ನಾಗರಿಕರಿಗೆ ಸ್ವಚ್ಛತೆಯ ಮಹತ್ವ ಸಾರಿದರು. ಲಾಲ್ ಬಹದ್ದೂರ್ ಶಾಸ್ತ್ರಿ ರಾಜಕೀಯ ಕ್ಷೇತ್ರದಲ್ಲಿದ್ದು, ದೇಶದ ಅತ್ಯಂತ ಸ್ವಚ್ಛ ಪ್ರಧಾನಿ ಎಂಬ ಅಭಿದಾನಕ್ಕೆ ಭಾಜನರಾದವರು. ಈ ದಿಸೆಯಲ್ಲಿ ಇವರಿಬ್ಬರೂ ಸ್ವಚ್ಛತೆಯ ವಿಭಿನ್ನ ಮುಖಗಳಾಗಿದ್ದು, ಇಬ್ಬರು ಸಹ ಅಕ್ಟೋಬರ್ 2ರಂದು ಜನಿಸಿರುವುದು ವಿಶೇಷ ಸಂಗತಿ ಎಂದು ಹೇಳಿದರು.2014 ರವರೆಗೆ ದೇಶದ ಆರ್ಥಿಕ ಸ್ಥಿತಿಗತಿ, ಜಾಗತಿಕ ಮಟ್ಟದಲ್ಲಿ ಇತರ ದೇಶಗಳು ಭಾರತವನ್ನು ನೋಡುತ್ತಿದ್ದ ದೃಷ್ಟಿಕೋನ ಹದಗೆಟ್ಟ ಸ್ಥಿತಿಯಲ್ಲಿತ್ತು, ಎಂದಿನಿಂದ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರೋ ಅಂದಿನಿಂದ ಭಾರತದ ಆರ್ಥಿಕ ಸ್ಥಿತಿ ಗತಿ, ವಿದೇಶೀಯರು ಭಾರತವನ್ನು ನೋಡುವ ರೀತಿ, ಗೌರವಿಸುವ ಪರಿ ಭಿನ್ನವಾಗಿದೆ. ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳ ಸಾಲಿನಲ್ಲಿ ಮುನ್ನುಗ್ಗುತ್ತಿದೆ. ಪ್ರಸಕ್ತವಾಗಿ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದ್ದು, 2028ರ ವೇಳೆಗೆ ಆರ್ಥಿಕತೆಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ರಾಷ್ಟ್ರವಾಗಲಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ, ಈ ಎಲ್ಲಾ ಬೆಳವಣಿಗೆಗೆ ನರೇಂದ್ರ ಮೋದಿ ಅವರ ಭ್ರಷ್ಟಾಚಾರ ಮುಕ್ತ ಆಡಳಿತವೇ ಮೂಲ ಕಾರಣ, ಮೋದಿಯವರ ನೇತೃತ್ವದಲ್ಲಿ ಭಾರತ ಸದೃಢವಾಗಿ ಬೆಳವಣಿಗೆ ಹೊಂದುತ್ತಿದೆ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಪ್ರಹ್ಲಾದ್ ಜೋಶಿಯವರು ನಿಷ್ಕಳಂಕ ವ್ಯಕ್ತಿತ್ವದ ರಾಜಕಾರಣಿ, ಈ ಹಿಂದೆ ದಿ.ಅನಂತಕುಮಾರ್ ಅವರು ರಾಜ್ಯದ ಪರ ಧ್ವನಿಯಾಗಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಅವರ ಕಾಲಾನಂತರ ಪ್ರಹ್ಲಾದ್ ಜೋಶಿಯವರು ಕೇಂದ್ರದಲ್ಲಿ ರಾಜ್ಯದ ಧ್ವನಿಯಾಗಿ ಅನಂತ್ ಕುಮಾರ್ ಅವರ ಸ್ಥಾನವನ್ನು ತುಂಬಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅಗತ್ಯವಿರುವ ಅನುದಾನ, ಅಭಿವೃದ್ಧಿ ಕಾರ್ಯಗಳನ್ನು ತರುವಲ್ಲಿ ಶ್ರಮಿಸುತ್ತಿದ್ದು, ನಿಷ್ಕಳಂಕ ವ್ಯಕ್ತಿತ್ವದ ಮೂಲಕ ಮಾದರಿ ಎನಿಸಿದ್ದಾರೆ ಎಂದರು.‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಶ್ರಮದಾನ, ಸಸಿ ನೆಡುವ ಕಾರ್ಯಕ್ರಮ, ಸ್ವಚ್ಚತಾ ಸಿಬ್ಬಂದಿಗೆ ಡಿಗ್ನಿಟಿ ಕಾರ್ಡ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂ.ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ಲತಾಕುಮಾರಿ, ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷರಾದ ಟಿ.ಮುನಿರೆಡ್ಡಿ, ಚಂದ್ರಶೇಖರ್, ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಎಚ್.ಬಿ.ಹನುಮಯ್ಯ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಉಪಾಧ್ಯಕ್ಷ ಪಿ.ಕೆ.ರಾಜಣ್ಣ, ಯಲಹಂಕ ತಾಪಂ ಇಒ ಮಧು, ಸಹಾಯಕ ನಿರ್ದೇಶಕ ಅಮರಯ್ಯ, ಗ್ರಾಪಂ ಸದಸ್ಯರಾದ ಕೆ.ಬಾಬು, ಮಲ್ಲೇಶ್, ಜೀವಿತಾ ಮುನಿಕೃಷ್ಣ, ಚೈತ್ರ ಕೆಂಪೇಗೌಡ, ಜಿ.ಸಿ.ಮಂಜುನಾಥ್, ಶೋಭಾಗೋಪಾಲ್, ನಂಜೇಗೌಡ ಉಪಸ್ಥಿತರಿದ್ದರು.