ಗೊಂದಲದ ಮಧ್ಯೆ ಪ್ರಜಾ ಸೇವೆ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Sep 06, 2026, 01:30 AM IST
5 ಟಿವಿಕೆ 1 – ತುರುವೇಕೆರೆ ತಾಲೂಕು ಮಾಯಸಂದ್ರದಲ್ಲಿ ನಡೆದ ಪ್ರಜಾ ಸೇವೆ ಕಾರ್ಯಕ್ರಮವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವೆ ಅಭಿಯಾನ ತಾಲೂಕಿನ ಮಾಯಸಂದ್ರದಲ್ಲಿ ಇಂದು ನೆರವೇರಿತು. ಬೆಳಗ್ಗೆ 11.30ಕ್ಕೆ ಪ್ರಾರಂಭಗೊಂಡಿತು. ಕೆಲ ಗೊಂದಲಗಳು ಆದ ಪರಿಣಾಮ ಕೇವಲ ಒಂದುವರೆ ಗಂಟೆಗಳಷ್ಟು ಕಾಲ ಮಾತ್ರ ವೇದಿಕೆ ಕಾರ್ಯಕ್ರಮ ನಡೆದು ಒಂದು ಗಂಟೆಗೆಲ್ಲಾ ಮುಕ್ತಾಯಗೊಂಡಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವೆ ಅಭಿಯಾನ ತಾಲೂಕಿನ ಮಾಯಸಂದ್ರದಲ್ಲಿ ಇಂದು ನೆರವೇರಿತು. ಬೆಳಗ್ಗೆ 11.30ಕ್ಕೆ ಪ್ರಾರಂಭಗೊಂಡಿತು. ಕೆಲ ಗೊಂದಲಗಳು ಆದ ಪರಿಣಾಮ ಕೇವಲ ಒಂದುವರೆ ಗಂಟೆಗಳಷ್ಟು ಕಾಲ ಮಾತ್ರ ವೇದಿಕೆ ಕಾರ್ಯಕ್ರಮ ನಡೆದು ಒಂದು ಗಂಟೆಗೆಲ್ಲಾ ಮುಕ್ತಾಯಗೊಂಡಿತು.

ಕಾರ್ಯಕ್ರಮ ಆರಂಭಗೊಂಡು ತಹಸೀಲ್ದಾರ್ ಕುಂ ಇ ಅಹಮದ್ ಈ ಸೇವೆಯ ಕುರಿತು ಮಾತನಾಡುತ್ತಿದ್ದ ವೇಳೆ ಮಾವಿನಕೆರೆಯ ನಂಜಪ್ಪ ಎಂಬುವವರು ವೇದಿಕೆ ಮೇಲೇರಿ ಕಳೆದ ನಾಲ್ಕು ವರ್ಷದಿಂದ ತಾಲೂಕು ಕಚೇರಿಗೆ ಅಲೆಯುತ್ತಿದ್ದೇನೆ. ಸಣ್ಣ ಕೆಲಸವೂ ಆಗಿಲ್ಲ. ಹೀಗಿದ್ದ ಮೇಲೆ ಇಂತಹ ಕಾರ್ಯಕ್ರಮಗಳ ಅಗತ್ಯವೇನಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಶಿವಣ್ಣ ಎಂಬವವರೂ ಸಹ ವೇದಿಕೆ ಮೇಲೇರಿ ತಮಗಾಗುತ್ತಿರುವ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು. ನಂತರ ತಾಲೂಕು ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮಾಯಸಂದ್ರ ಹೋಬಳಿ ಮಟ್ಟದಲ್ಲಿ ಆಗಬೇಕಿರುವ ಸುಮಾರು 15 ಕ್ಕೂ ಹೆಚ್ಚು ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.ಈ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಓಯ್ ಸಾಕು ಬಿಡೋ ಎಂದು ಪದೇ ಪದೇ ಹೇಳಿದುದು ಕಣಕೂರು ಚಂದ್ರಶೇಖರ್ ರನ್ನು ಕೆರಳಿಸಿತು. ಶಾಸಕರಾದ ನೀವು ಜನರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ. ಇಲ್ಲಿ ಮಾಡಿರುವ ಕಾರ್ಯಕ್ರಮದ ಉದ್ದೇಶವಾದರೂ ಏನು?. ಜನರನ್ನು ಗದರುವುದು ಸರಿಯಲ್ಲ ಎಂದು ಶಾಸಕರ ವಿರುದ್ಧ ವೇದಿಕೆ ಮೇಲೆ ಕಿಡಿಕಾರಿದರು. ಕಳೆದ ತಿಂಗಳು ಜಿಲ್ಲಾಧಿಕಾರಿಗಳು ಮಾಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲೂ ಇದೇ ತರಹ ಹತ್ತಾರು ಮನವಿಗಳನ್ನು ನೀಡಿದ್ದೇವೆ. ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಚಂದ್ರಶೇಖರ್ ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಾಸಕರು ತಾಲೂಕಿನ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಜನರ ಸೇವೆ ಆಗುತ್ತಿಲ್ಲ ಎಂಬುದು ಸತ್ಯ. ಹಾಗಾಗಿ ಜನರು ರೋಸಿ ಹೋಗಿದ್ದಾರೆ. ತಹಸೀಲ್ದಾರ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೂ ಇತ್ತ ಗಮನ ನೀಡಬೇಕೆಂದು ಸೂಚಿಸಿದರು.

ಈ ವೇಳೆ ತಹಸೀಲ್ದಾರ್ ಎನ್. ಎ.ಕುಂ ಇ ಅಹಮದ್, ಇಓ ಅನಂತ ರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಗೋಣಿತುಮಕೂರು ಕಾಂತರಾಜು, ಲೋಕೋಪಯೋಗಿ ಇಲಾಖಾ ಎಇಇ ಕಣ್ಮಣಿ. ಕೃಷಿ ಸಹಾಯಕ ನಿರ್ದೇಶಕಿ ಪೂಜಾ, ತೋಟಗಾರಿಕಾ ಸಹಾಯಕ ನಿರ್ದೇಶಕ ಸುರೇಶ್, ಹೇಮಾವತಿ ನಾಲಾ ಎಇಇ ಶಿವಕುಮಾರ್, ಗ್ರಾಮೀಣ ಕುಡಿಯುವ ಯೋಜನೆಯ ಎಇಇ ಆಶೀಂ ಅಹಮದ್, ಬೆಸ್ಕಾಂ ಎಇಇ ರಾಜಶೇಖರ್, ಜಿಲ್ಲಾ ಪಂಚಾಯಿತಿ ಎಇಇ ಪುಷ್ಪಾಲತಾ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

-------------------

ಕೋಟ್‌

ಜನರ ಸಮಸ್ಯೆಗಳನ್ನು ಆಲಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರಯೋಜನವಿಲ್ಲ ಎಂಬುದೂ ಸತ್ಯ. ಈಗ ಮಾಡಿರುವ ಪ್ರಜಾ ಸೇವೆ ಅಭಿಯಾನವೂ ಬೇರೇನೂ ಅಲ್ಲ. ಇದೊಂದು ಡಿ.ಕೆ.ಶಿವಕುಮಾರ್ ತಾನು ಆರಂಭಿಸಿದ ಯೋಜನೆ ಎಂದು ಬೆನ್ನು ತಟ್ಟಿಕೊಳ್ಳಲು ಮಾಡಿರುವ ಕಾರ್ಯಕ್ರಮ ಅಷ್ಠೇ. ಇದೊಂದು ಪ್ರಚಾರದ ಕಾರ್ಯಕ್ರಮ ಅಷ್ಠೇ. -ಎಂ.ಟಿ.ಕೃಷ್ಣಪ್ಪ ಶಾಸಕ

--------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರತ್ನಕುಮಾರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ
ಒಬ್ಬರ ರಕ್ತದಾನದಿಂದ ಮೂವರಿಗೆ ಜೀವದಾನ: ಡಾ.ಆನಂದ್‌