ಹಾಸನದಲ್ಲಿ ಬೃಹತ್‌ ಮೆರವಣಿಗೆಯಲ್ಲಿ ಪ್ರಜ್ವಲ್‌ 2ನೇ ಬಾರಿ ನಾಮಪತ್ರ

KannadaprabhaNewsNetwork | Published : Apr 5, 2024 1:00 AM

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಗುರುವಾರ ಹಾಸನದಲ್ಲಿ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾ ಚುನಾವಣೆ ಅಧಿಕಾರಿ ಸಿ.ಸತ್ಯಭಾಮ ಅವರಿಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಭ್ಯರ್ಥಿ ಪ್ರೀತಂ ಗೌಡ ಗೈರು । ಸತ್ಯಭಾಮಗೆ ಉಮೇದುವಾರಿಕೆ ಸಲ್ಲಿಕೆ । ಬಿವೈವಿ, ಪ್ರಮುಖ ನಾಯಕರು ಭಾಗಿ

ಕನ್ನಡಪ್ರಭ ವಾರ್ತೆ ಹಾಸನ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಗುರುವಾರ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾ ಚುನಾವಣೆ ಅಧಿಕಾರಿ ಸಿ.ಸತ್ಯಭಾಮ ಅವರಿಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಬಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹಿ ಹಾಕಿ ಹೋದರು.

ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಕರುಗಳಾದ ಸಿಮೆಂಟ್ ಮಂಜು, ಎಚ್.ಕೆ.ಸುರೇಶ್, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಉಪಾಸಭಾಪತಿ ಪ್ರಾಣೇಶ್ ಎಚ್.ಕೆ. ಕುಮಾರಸ್ವಾಮಿ ಆಗಮಿಸಿದ್ದರು.

ಇದಕ್ಕೂ ಮೊದಲು ಚುನಾವಣಾಧಿಕಾರಿಗಳ ಕಾರ್ಯಾಲಯದ ಒಳಗೆ ತೆರಳಿ ಬಂದ ಮಾಜಿ ಸಚಿವ ಎಚ್.ಡಿ. ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಜಿಪಂ ಶಿಕ್ಷಣ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂಗೌಡ ಸಹ ಜೊತೆಯಲ್ಲಿದ್ದರು.

ಬಾರದ ಪ್ರೀತಂಗೌಡ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಜ್ವಲ್‌ ಅವರ ನಾಮಪತ್ರ ಸಲ್ಲಿಕೆ ವೇಳೆ ಆಗಮಿಸಿದರೂ ಕೂಡ ಪ್ರೀತಂಗೌಡ ಆಗಮಿಸಲಿಲ್ಲ. ನಗರದ ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಮೈತ್ರಿ ಪಕ್ಷಗಳ ಮೆರವಣಿಗೆ ಜನ ಸಾಗರದಂತೆ ಕಂಡು ಬಂದಿತು. ಡಿಜೆ ಸೌಂಡ್‌ಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.

ನಂತರ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೇಂದ್ರ ಮಾತನಾಡಿ, ‘ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇವತ್ತು ರಾಜ್ಯದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ೨೦೪೭ರ ವೇಳೆಗೆ ವಿಕಸಿತ ಭಾರತ ಆಗಬೇಕು. ಅದಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು. ಅದು ನನಸಾಗುವ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ನಮಗೆ ದೊಡ್ಡ ಶಕ್ತಿಯನ್ನು ತಂದು ಕೊಟ್ಟಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲೂ ಸಹ ನಮಗೆ ಸಂಪೂರ್ಣ ವಿಶ್ವಾಸವಿದೆ. ಬಿಜೆಪಿ-ಜೆಡಿಎಸ್ ಎರಡು ಒಂದಾಗಿವೆ. ಎನ್‌ಡಿಎ ಅಭ್ಯರ್ಥಿ ಆಗಿರುವ ಪ್ರಜ್ವಲ್ ರೇವಣ್ಣ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರೀತಂಗೌಡ ಗೈರು ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ‘ನಿನ್ನೆ ದಿನ ಜಿಲ್ಲೆಯ ನಾಯಕರು ಕುಳಿತು ಪದಾಧಿಕಾರಿಗಳ ಸಭೆ ಮಾಡಿದ್ದಾರೆ. ಒಂದೆರಡು ದಿನದಲ್ಲಿ ಈ ಬಗ್ಗೆ ತಿಳಿಯುತ್ತದೆ’ ಎಂದರು.

‘ಜೆಡಿಎಸ್ ಪಕ್ಷ ಎನ್‌ಡಿಎ ತೆಕ್ಕೆಗೆ ಬಂದಿದೆ. ನಮ್ಮ ಅಭ್ಯರ್ಥಿಗಳನ್ನು ಅವರ ಕಾರ್ಯಕರ್ತರು ತಳಮಟ್ಟದಿಂದ ಬೆಂಬಲಿಸಬೇಕು. ಎಲ್ಲಿ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ ಅವರನ್ನು ಸಂಪೂರ್ಣವಾಗಿ ಬೆಂಬಲಿಸಬೇಕು, ಗೆಲ್ಲಿಸಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಇದು ನಮ್ಮ ಮುಂದೆ ಇರುವ ಗುರಿ. ನಮ್ಮ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು ಗೆಲ್ಲಬೇಕು. ಅದಕ್ಕಾಗಿ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು, ಪ್ರತಿಯೊಬ್ಬರು ಕೆಲಸ ಮಾಡಬೇಕು. ಪ್ರತಿಯೊಬ್ಬರು ಎಂದರೆ ಅದರಲ್ಲಿ ಪ್ರೀತಂಗೌಡ ಸಹ ಸೇರುತ್ತಾರೆ’ ಎಂದು ಹೇಳಿದರು.

‘ಡಿ.ಕೆ. ಶಿವಕುಮಾರ್ ಏನು ಹೇಳ್ತಾರೆ ಅನ್ನೋದು ಮುಖ್ಯವಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದೆ. ದೇವೇಗೌಡರು ಕೂಡ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಕಾರಣ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇಟ್ಟಿರುವ ಅಚಲ ವಿಶ್ವಾಸ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಚ್‌.ಡಿ.ದೇವೇಗೌಡ, ರೇವಣ್ಣ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ.

Share this article