ಧಾರವಾಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯಿಂದ ರಾಜ್ಯದ ಜನರಿಗೆ ನೋವಾಗಿದೆ. ಹೀಗಾಗಿ, ಕೇಂದ್ರದ ಬಿಜೆಪಿ ಹಿರಿಯ ನಾಯಕರು ಪುನರ್ ಪರಿಶೀಲಿಸಿ ಯತ್ನಾಳ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಮಾತ್ರ ಹಿಂದುತ್ವದ ರಕ್ಷಣೆ ಎಂಬುದನ್ನು ನಾವು ಮೊದಲಿನಿಂದಲೂ ನಂಬಿದ್ದೇವೆ. ಬಸನಗೌಡ ಪಾಟೀಲ ಯತ್ನಾಳ ಅವರು ಹಿಂದುತ್ವದ ಪರ ಮಾತನಾಡುವ ಗಟ್ಟಿ ಧ್ವನಿ ಹೊಂದಿರುವ ವ್ಯಕ್ತಿ. ಇದೀಗ ಉಚ್ಚಾಟನೆಯಿಂದ ಹಿಂದುಗಳಿಗೆ ನೋವಾಗುವುದು ಸಹಜ. ಹೀಗಾಗಿ, ಅವರ ಉಚ್ಚಾಟನೆಯನ್ನು ಮರು ಪರಿಶೀಲಿಸಿ ಪಕ್ಷ ಸಂಘಟನೆಗೆ ಅವಕಾಶ ನೀಡಬೇಕು ಎಂದರು.
ಯತ್ನಾಳ ಅವರು ಹೊಸ ಪಕ್ಷ ಕಟ್ಟುವುದು ಅವರ ವೈಯಕ್ತಿಕ ವಿಚಾರ. ಈ ವಿಚಾರವಾಗಿ ಅವರು ನನ್ನೊಂದಿಗೆ ಮಾತನಾಡಿಲ್ಲ. ನಿಜವಾದ ಹಿಂದುತ್ವ ದೃಷ್ಟಿ ಇದ್ದರೆ ಅವರು ಆಹ್ವಾನಿಸಿದರೆ ಸಂಘಟನೆ ಪದಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯುಗಾದಿ ಹಾಗೂ ಶ್ರೀ ರಾಮನವಮಿ ಹಬ್ಬವನ್ನು ಹಿಂದುಗಳು ಹಲಾಲ್ ಮುಕ್ತ ಆಚರಣೆ ಮಾಡಬೇಕು. ಹಲಾಲ್ ಇಸ್ಲಾಮಿಯರಿಗೆ ಸಂಬಂಧಿಸಿದ್ದು, ಬೇಕಿದ್ದರೆ ಅವರು ಮಾಡಿಕೊಳ್ಳಲಿ. ಆದರೆ, ಅದನ್ನು ಹಿಂದುಗಳ ಮೇಲೆ ಹೇರುವುದು ಸರಿಯಲ್ಲ. ಕಾಯಿ, ಕರ್ಪೂರ, ಹೂವು, ಹಣ್ಣುಗಳನ್ನು ಹಲಾಲ್ ಮೂಲಕ ಮಾರುತ್ತಿದ್ದಾರೆ. ಇದನ್ನು ಹಿಂದುಗಳಿಗೆ ಅಶಾಸ್ತ್ರವಾದದ್ದು. ಹೀಗಾಗಿ ಹಿಂದುಗಳ ಜತೆಗೆ ವ್ಯಾಪಾರ ವಹಿವಾಟು ನಡೆಸಿ ಹಲಾಲ್ ಮುಕ್ತ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಇನ್ನು ರಮಜಾನ್ ಸಮಯದಲ್ಲಿ ಗೋವುಗಳ ಅಕ್ರಮ ಸಾಕಾಣೆ ಸಾಕಷ್ಟು ಹೆಚ್ಚಿದೆ. ಗೋ ಹತ್ಯ ನಿಷೇಧ ಕಾನೂನು ಜಾರಿಯಾಗಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣಕ್ಕೆ ಇನ್ನು 2-3 ದಿನಗಳ ಕಾಲ ಪ್ರತಿ ಚೆಕ್ಪೋಸ್ಟ್ನಲ್ಲಿ ನಮ್ಮ ಸಂಘಟನೆ ಯುವಕರು ವಾಹನಗಳ ಮೇಲೆ ನಿಗಾ ಇಡಲಿದ್ದಾರೆ. ಇದರಿಂದ ಏನಾದರೂ ಅವಘಡಗಳು ಸಂಭವಿಸಿದರೆ ಪೊಲೀಸರು ಹಾಗೂ ರಾಜ್ಯ ಸರ್ಕಾರವೇ ಕಾರಣ ಎಂದು ಎಚ್ಚರಿಸಿದರು.
ಗಂಗಾಧರ ಕುಲಕರ್ಣಿ, ಅಮೃತೇಶ, ಬಸವರಾಜ, ಇತರರು ಇದ್ದರು.
ಏ. 1ರಂದು ಪ್ರತಿಭಟನೆ
ನವಲಗುಂದ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ನವಲಗುಂದ ತಾಲೂಕು ಘಟಕದಿಂದ ಏ.1ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ನೀಲಮ್ಮನ ಜಲಾಶಯ ವೃತ್ತದ ಬಳಿ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ನಾಗನಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯತ್ನಾಳ ಉಚ್ಚಾಟನೆ: ನಾಳೆ ಸಭೆ
ಕುಂದಗೋಳ: ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ವಿವಿಧ ಹಿಂದೂ ಪರ ಸಂಘಟನೆಗಳು, ಯತ್ನಾಳ ಅಭಿಮಾನಿಗಳಿಂದ ಮಠಾದೀಶರ ನೇತೃತ್ವದಲ್ಲಿ ಪಟ್ಟಣದ ಕಲ್ಯಾಣಪುರ ಮಠದಲ್ಲಿ ಮಾ.31 ಪೂರ್ವಭಾವಿ ಸಭೆ ಕರೆಯಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಸಭೆ ಜರುಗಲಿದ್ದು, ಮುಂದಿನ ಹೋರಾಟದ ಬಗ್ಗೆ ನಿರ್ಣಯಕೈಗೊಳ್ಳಲಾಗುವುದು ಎಂದು ಮುಖಂಡ ಬಸವರಾಜ ನಾವಳ್ಳಿ ತಿಳಿಸಿದ್ದಾರೆ.