ಪ್ರಾರಬ್ಧ ಕರ್ಮಗಳೇ ಸುಖ, ದುಃಖಗಳಿಗೆ ಕಾರಣ: ವೇ.ಮೂ. ಕೃಷ್ಣ ಅಡಿಗ

KannadaprabhaNewsNetwork | Published : Apr 22, 2025 1:47 AM

ಸಾರಾಂಶ

ಬಂಟಕಲ್ಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಪರಿವಾರ ಸಾನಿಧ್ಯಗಳ ನೇಮೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ನಮ್ಮ ಕಷ್ಟಗಳಿಗೆ ಪಾಪಕರ್ಮಗಳೇ ಕಾರಣವಾಗಿದ್ದು, ಅದರ ಪರಿಹಾರಕ್ಕೆ ಪುಣ್ಯ ಸಂಗ್ರಹ ಅಗತ್ಯ. ಪ್ರಾರಬ್ಧ ಕರ್ಮಗಳೇ ನಮ್ಮೆಲ್ಲಾ ಸುಖ ದುಃಖಗಳಿಗೆ ಕಾರಣ ಎಂದು ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಕೃಷ್ಣ ಅಡಿಗ ನುಡಿದರು.

ಅವರು ಶುಕ್ರವಾರ ಬಂಟಕಲ್ಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಪರಿವಾರ ಸಾನಿಧ್ಯಗಳ ನೇಮೋತ್ಸವದ ಪ್ರಯುಕ್ತ ಬಂಟಕಲ್ಲು ಪೇಟೆಯಲ್ಲಿ ಏರ್ಪಡಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಎಲ್ಲಾ ಜಾತಿ,ವರ್ಗದವರು ಅವರವರ ಶ್ರೇಷ್ಠತೆಯಲ್ಲಿ ಹಿರಿಯರೇ ಆಗಿದ್ದಾರೆ. ಪ್ರತಿಯೊಂದು ಜಾತಿಗೂ ಒಂದು ವೃತ್ತಿ ಇದೆ. ಜಾತಿ ಬೇಕು, ಭೇದ ಬೇಡ. ಪ್ರತೀ ಒಂದು ಜಾತಿಯ ಕಟ್ಲೆಯಲ್ಲಿ ಪರಿಧಿ ಇದೆ. ಹೊರಗೆ ಬಂದಾಗ ನಾವು ಭಾರತೀಯ, ಕನ್ನಡಿಗ, ತುಳುವ ನಾವೆಲ್ಲ ಒಂದೇ ಆಗಿದ್ದೇವೆ. ಕೊಡು ಕೊಳ್ಳುವಿಕೆ ಇಲ್ಲದೆ ಯಾವುದೇ ವ್ಯವಹಾರಗಳಿಲ್ಲ ಎಂದು ಅವರು ಹೇಳಿದರು.

ಹಿಂದಿನ ಜನ್ಮದ ಪುಣ್ಯದಿಂದ ನಮಗೆ ಈ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸುಖ ಬೇಕಾದರೆ ಪುಣ್ಯ ಬೇಕು. ನಮಗೆಲ್ಲರಿಗೂ ಸಮಾಜದ ಋಣ ಇದೆ. ಎಲ್ಲದಕ್ಕೂ ನಂಬಿಕೆ ಮುಖ್ಯ ಎಂದು ತಿಳಿಸಿ ಬಬ್ಬುಸ್ವಾಮಿಯ ಹಿನ್ನೆಲೆ ಮತ್ತು ಕಾರಣಿಕದ ಬಗ್ಗೆ ಸವಿವರ ಮಾಹಿತಿ ನೀಡಿದರು.

ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷೆ ಪ್ರಫುಲ್ಲಾ ಜಯಶೆಟ್ಟಿ ಉದ್ಘಾಟಿಸಿ ಬಂಟಕಲ್ಲು ಬಬ್ಬುಸ್ವಾಮಿಯ ಕುರಿತು ಸ್ವರಚಿತ ಭಕ್ತಿಗೀತೆಯನ್ನು ಹಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅದಾನಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಡಾ.ಕಿಶೋರ್ ಆಳ್ವ ಮಾತನಾಡಿ ತುಳುನಾಡಿನಲ್ಲಿ ಯುವಶಕ್ತಿಯ ಜಾಗೃತಿಯಿಂದ ಅನೇಕ ಶಾಲೆ, ದೇವಾಲಯ, ನಾಗಾಲಯ,ದೈವಸ್ಥಾನಗಳ ಜೀರ್ಣೋದ್ಧಾರದೊಂದಿಗೆ ಧಾರ್ಮಿಕ ಕಾರ್ಯಗಳು ಎಲ್ಲೆಡೆ ನಡೆಯುತ್ತಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ ಎಂದರು.

ಕ್ಷೇತ್ರದ ಗುರಿಕಾರ ಶಂಕರ ಪದಕಣ್ಣಾಯ ಮಾತನಾಡಿ ಕ್ಷೇತ್ರ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ಕೆ ಸಹಕರಿಸಿದ ಸರ್ವರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಕೋಡಿ ಕಂಡಾಳ ಕ್ಷೇತ್ರ ಪಡುತೋನ್ಸೆ ಕೆಮ್ಮಣ್ಣು ರಘುರಾಮ ಶೆಟ್ಟಿ, ಭೋಜ ಪಾತ್ರಿ, ಮಧ್ಯ.ಸುರತ್ಕಲ್. ರಾಮಕೃಷ್ಣ ನಾಯಕ್ ಮಧ್ಯಸ್ಥರು, ಬಂಟಕಲ್ಲು ಇವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಸಡಂಬೈಲು ವಹಿಸಿದ್ದರು. ವೇದಿಕೆಯಲ್ಲಿ ಮುಂಬೈ ಸಮಿತಿ ಗೌರವ ಅಧ್ಯಕ್ಷ ಮೋಹನ್ ಜೆ.ಶೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ವೀರೇಂದ್ರ ಶೆಟ್ಟಿ,ಗಣೇಶ ಶೆಟ್ಟಿ ಸಾಣದಮನೆ, ಕೆ.ಸಿ.ಚಂದ್ರಶೇಖರ್ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಎಸ್.ಎಸ್.ಪ್ರಸಾದ್ ನಿರೂಪಿಸಿದರು. ದಿನೇಶ್ ಕೆ. ವಂದಿಸಿದರು.

Share this article