;Resize=(412,232))
ಬೆಂಗಳೂರು : ಮಾಜಿ ಸಂಸದ ಮತ್ತು ಹಾಲಿ ಶಾಸಕರ ನಡುವೆ ಶುಕ್ರವಾರ ನಡೆದ ವೈಯಕ್ತಿಕ ವಾಗ್ದಾಳಿ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀರಾ ವೈಯಕ್ತಿಕ ಮಟ್ಟದ ಕೀಳು ಭಾಷೆ ಬಳಸಿ ಪರಸ್ಪರ ನಿಂದಿಸಿಕೊಂಡಿದ್ದಾರೆ.
ಇವರ ಮಾತುಗಳನ್ನು ಕೇಳಿದ ಜನರು ಇಬ್ಬರಿಗೂ ಹಿರಿಯರು ಬುದ್ಧಿವಾದ ಹೇಳುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಾಜಿ ಸಂಸದ ಮತ್ತು ಶಾಸಕರ ಪಕ್ಷಗಳ ಮುಖಂಡರು ಇಬ್ಬರಿಗೂ ಅನೇಕ ಹಿರಿಯರು ಹಿತವಚನ ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿ ವಿಚಾರವಾಗಿ ಶುರುವಾದ ನಿಂದನೆ ರಾಜಕೀಯಕ್ಕೆ ಸೀಮಿತವಾಗದೇ ವೈಯಕ್ತಿಕ ನಿಂದನೆಗೆ ಇಳಿದಿದೆ. ಪರಸ್ಪರರು ತೀರಾ ಕೆಟ್ಟಭಾಷೆಗಳಲ್ಲಿ ಮಾತನಾಡಿದ್ದಾರೆ. ಇವರ ಭಾಷೆಗಳು ಜನಪ್ರತಿನಿಧಿಗಳಿಗೆ ಶೋಭೆ ತರುವ ರೀತಿಯಲ್ಲಿ ಇರಲಿಲ್ಲ. ಹಾಗೆಯೇ ಸಭ್ಯರು ಕೇಳಿಸಿಕೊಳ್ಳುವ ಪದಗಳೂ ಆಗಿರಲಿಲ್ಲ. ಇವರಿಬ್ಬರೂ ಪರಸ್ಪರರ ಬಗ್ಗೆ ಮಾಡಿದ ಮಾತುಗಳ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಹಲವರು ಇಬ್ಬರನ್ನೂ ಟೀಕಿಸಿ ಕಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಇವರಿಗೆ ಬುದ್ಧಿಮಾತು ಹೇಳುವವರು ಯಾರೂ ಇಲ್ಲವೇ ಎಂದು ಪ್ರತಿಕ್ರಿಯಿಸಿದ್ದರು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿಯ ಹಿರಿಯರು ಭಾಷೆಯ ಮೇಲೆ ಹಿಡಿತ ಸಾಧಿಸಿ ಎಂದು ವೈಯಕ್ತಿಕವಾಗಿ ಇಬ್ಬರಿಗೂ ಸಲಹೆ ನೀಡಿದ್ದಾರೆ.