ಕನ್ನಡಪ್ರಭ ವಾರ್ತೆ ಕಾರವಾರ
ಏ. 28ರಂದು ಬೆಳಗ್ಗೆ 8 ಗಂಟೆಗೆ ಶ್ರೀ ನರಸಿಂಹ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಏ. 29ರಂದು ಪ್ರತಿಷ್ಠಾಪನೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 10.52ಕ್ಕೆ ಕಾರವಾರದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಭವೇಶಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಶಿಖರ ಸ್ಥಾಪನೆಯಾಗಲಿದೆ. ಅಂದು ಬೆಳಗ್ಗೆ ವಿಶೇಷ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ ಸೈಲ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಭಕ್ತರಿಗಾಗಿ ಮಹಾ ಅನ್ನಸಂತರ್ಪಣೆ ಇರುತ್ತದೆ. ಸಂಜೆ ಧಾರ್ಮಿಕ ಸಭೆ, ರಾಜೋಪಚಾರ ಪೂಜೆ, ನ್ಯಾಸವಿಧಿ, ಮಂತ್ರಜಾಗರಣೆ, ಬಲಿ ವಿಧಿಗಳು ನೆರವೇರಲಿವೆ.
ಏ. 30ರಂದು ನರಸಿಂಹ ಜಯಂತಿ ನಡೆಯಲಿದೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಇರುತ್ತದೆ. ಸಂಜೆ 5 ಗಂಟೆಯಿಂದ ಭಜನೆ ಮತ್ತು ನಾಮಸಂಕೀರ್ತನೆ ಜರುಗಲಿವೆ. ಆನಂತರ ಪಲ್ಲಕ್ಕಿ ಉತ್ಸವ ಮತ್ತು ಪಾನಕ-ಪಚಡಿ ಸೇವೆ, ಮಹಾಪೂಜೆ ನಡೆಯಲಿದೆ. ರಾತ್ರಿ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊಂಕಣಿ ನಾಟಕ, ಪ್ರೇಕ್ಷಕರನ್ನು ಮನರಂಜಿಸಲಿವೆ. ಮಧ್ಯರಾತ್ರಿ ಧ್ವಜ ಅವರೋಹಣದೊಂದಿಗೆ ಈ ದಿವ್ಯ ಮಹೋತ್ಸವ ಮುಕ್ತಾಯವಾಗಲಿದೆ ಎಂದು ಶ್ರೀ ನರಸಿಂಹ ನಾರಾಯಣ ದೇವ ಸಂಸ್ಥಾನ ಕಮಿಟಿ ಪ್ರಕಟಣೆ ತಿಳಿಸಿದೆ.