ದುರ್ಗಾಕುಮಾರ್ ನಾಯರ್‌ಕೆರೆ
ಭಾನುವಾರ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರುವ ತಂಡದಲ್ಲಿ ದಿ. ಪ್ರವೀಣ್ ನೆಟ್ಟಾರ್ ಅವರ ತಾಯಿ ರತ್ನಾವತಿ ಶೇಖರ ಪೂಜಾರಿಯವರಿಗೆ ಅವಕಾಶ ದೊರೆತಿದ್ದು, ಮಗ ಪ್ರವೀಣ್‌ನಿಂದಾಗಿ ಈ ಅವಕಾಶ ತನಗೆ ದೊರೆಯಿತು ಎಂದು ರತ್ನಾವತಿ ಹೇಳಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ರೋಡ್ ಶೋ ನಡೆಸಲು ಕಡಲ ನಗರಿ ಮಂಗಳೂರಿಗೆ ಆಗಮಿಸಿದ್ದ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರುವ ತಂಡದಲ್ಲಿ ರತ್ನಾವತಿಯವರಿಗೂ ಅವಕಾಶ ನೀಡಲಾಗುವ ಕುರಿತು ಬಿಜೆಪಿ ಕಚೇರಿಯಿಂದ ತಿಳಿಸಲಾಗಿತ್ತು.ಅದರಂತೆ ಬಿಜೆಪಿ ಯುವ ನಾಯಕರಾಗಿದ್ದ ಪ್ರವೀಣ್ ನೆಟ್ಟಾರ್ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ ಹಾಗೂ ಸಹೋದರಿ ನಳಿನಿ ಮಂಗಳೂರಿಗೆ ತೆರಳಿದ್ದರು. ಭದ್ರತೆಯ ದೃಷ್ಟಿಯಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗಿತ್ತು.ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸ್ವಾಗತಿಸುವ ವೇಳೆ ರತ್ನಾವತಿ ಅವರಿಗೆ ಭದ್ರತಾ ಪಡೆಯ ತಪಾಸಣೆಯ ಬಳಿಕ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. ಕುಟುಂಬದ ಉಳಿದವರು ಹೊರಗಿದ್ದರು.
ಫೊಟೋದಲ್ಲಿ, ಟಿ.ವಿ.ಯಲ್ಲಿ ಮಾತ್ರ ನೋಡುತ್ತಿದ್ದ ಮೋದಿಯವರನ್ನು ಕಣ್ಣೆದುರೇ ನೋಡುತ್ತೇನೆ ಎಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಅಂಥ ಸೌಭಾಗ್ಯ ದೊರೆಯಿತು. ಮೋದೀಜಿಯನ್ನು ಭೇಟಿಯಾಗಬೇಕು ಎನ್ನುವುದು ಪ್ರವೀಣನ ಕನಸಾಗಿತ್ತು. ಆದರೆ ಅವನಿಂದಾಗಿ ನನಗೆ ದೊರೆಯಿತು ಎಂದು ರತ್ನಾವತಿ ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳಿದರು.