ಕನ್ನಡಪ್ರಭ ವಾರ್ತೆ ಮಡಿಕೇರಿ/ನಾಪೋಕ್ಲು
ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಯಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2 ರಂದು ಕೊಡಗಿಗೆ ಟ್ರೆಕ್ಕಿಂಗ್‌ಗಾಗಿ ಬಂದಿದ್ದರು. ಆನ್‌ಲೈನ್ ಮೂಲಕ ಟ್ರೆಕ್ಕಿಂಗ್ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು. ನಾಲ್ಕು ದಿನಗಳಿಂದ ಆಕೆಗಾಗಿ ಹುಡುಕಾಟ ನಡೆದಿತ್ತು.
ಕಾಡಿನಿಂದ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ಯ, ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಕಾಡಿನಲ್ಲಿ ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಬಳಿ ಇದ್ದಿದ್ದು ಕೇವಲ ಒಂದು ಬಾಟಲಿ ನೀರು ಮಾತ್ರ. ರಕ್ಷಣಾ ತಂಡವು ನನ್ನನ್ನು ಹುಡುಕಲು ಡ್ರೋಣ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋಣ್‌ಗೆ ಕಾಣಿಸುವಂತಹ ಬಯಲು ಜಾಗದಲ್ಲೇ ನಾನು ಹೆಚ್ಚಾಗಿ ನಿಂತಿದ್ದೆ ಎಂದು ಅವರು ವಿವರಿಸಿದ್ದಾರೆ. ಅವರ ಈ ಸಮಯಪ್ರಜ್ಞೆಯೇ ಅವರ ಪ್ರಾಣ ಉಳಿಸಿದೆ ಎನ್ನಬಹುದು.ಶರಣ್ಯ ನಾಪತ್ತೆಯಾದ ದಿನದಿಂದಲೂ ಕೊಡಗು ಜಿಲ್ಲಾ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ಮತ್ತು ಸ್ಥಳೀಯ ನಿವಾಸಿಗಳು ಹಗಲಿರುಳು ಶೋಧ ನಡೆಸಿದ್ದರು. ಡ್ರೋಣ್, ಥರ್ಮಲ್ ಡ್ರೋಣ್ ಮತ್ತು ಶ್ವಾನ ದಳವನ್ನು ಬಳಸಲಾಗಿತ್ತು. ಕೊನೆಗೆ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ವಿಚಿತ್ರ ಶಬ್ದ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ. ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು, ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಡಿನಿಂದ ಸುರಕ್ಷಿತವಾಗಿ ಕರೆತರಲಾದ ಶರಣ್ಯ ಅವರನ್ನು ಸಮೀಪದ ಕಾಕಬೆ ಗ್ರಾಮಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತೀವ್ರ ಹಸಿವು ಮತ್ತು ಸುಸ್ತಿನಿಂದ ಬಳಲಿದ್ದರೂ ಅವರ ಮಾನಸಿಕ ಸ್ಥಿತಿ ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಮಡಿಕೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು.ಈ ಬಗ್ಗೆ ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿ, ಕಳೆದ ನಾಲ್ಕು ದಿನಗಳಿಂದ ಶರಣ್ಯ ತಡಿಯಂಡಮೋಳ್ ನಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಅರಣ್ಯ ಸಚಿವರು ಈ ಬಗ್ಗೆ ಚರ್ಚಿಸಿದ್ದರು. ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಪತ್ತೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಸ್ಥಳೀಯರು ಕೂಡ ಬೆಳಗ್ಗಿನಿಂದ ರಾತ್ರಿ ವರೆಗೆ ಹುಡುಕಾಟ ನಡೆಸಿದ್ದಾರೆ. ಒಂದು ಬಾಟಲಿ ನೀರಿನಲ್ಲಿ ನಾಲ್ಕು ದಿನ ಕಳೆದ ಟೆಕ್ಕಿ
ತಡಿಯಂಡಮೋಳ್ ಬೆಟ್ಟದಲ್ಲಿ ಶರಣ್ಯ ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೇ ವ್ಯಾಪ್ತಿಯ ಯವಕಪಾಡಿಯಲ್ಲಿ ನೆಲೆಸಿರುವ ಕುಡಿಯ ಜನಾಂಗದವರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ಸೇಂದಿ, ಹಂದಿ, ಕೋಳಿ ನೀಡುವ ಹರಕೆಯನ್ನು ಕೂಡ ಹೊತ್ತಿದ್ದರು. ಇದೀಗ ಕುಡಿಯ ಜನಾಂಗದ ನಿವಾಸಿಗಳೇ ಆಕೆಯನ್ನು ಪತ್ತೆ ಮಾಡಿದ್ದು, ಆ ಮೂಲಕ ಜನಾಂಗದವರ ಹರಕೆ ಫಲಿಸಿದೆ.