ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಸಲಹೆ ಸೂಚನೆ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಬಜೆಟ್ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕೇವಲ ಕಾಟಾಚಾರಕ್ಕೆ ಸಾರ್ವಜನಿಕ ಸಭೆ ಮಾಡಬಾರದು. ನಾವು ಪ್ರತಿವರ್ಷ ಅದೇ ವಿಷಯಗಳನ್ನು ಹೇಳುವುದು ಆಗಬಾರದು. ಸಾರ್ವಜನಿಕರು ಸೂಚಿಸಿದ ಎಷ್ಟು ಅಂಶಗಳನ್ನು ಪುರಸಭೆ ಬಜೆಟಿನಲ್ಲಿ ಸೇರಿಸಿ ಕಾರ್ಯರೂಪಕ್ಕೆ ತರಲಾಗಿದೆ ಎಂಬುದನ್ನು ಸಾರ್ವಜನಿಕರ ಎದುರು ಬಹಿರಂಗ ಪಡಿಸಬೇಕೆಂದು ನ್ಯಾಯವಾದಿ ಸುರೇಶ ಮಡಿವಾಳರ ಆಗ್ರಹಿಸಿದರು.

ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಪುರಸಭೆಯ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತಾಡಿದರು. ಪುರಸಭೆ ಲೆಕ್ಕಪಾಲಕ ವಿ.ಜಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಭೆ ಉದ್ದೇಶ ಮತ್ತು 2023-24 ಬಜೆಟಿನಲ್ಲಿ ಸಾಧಿಸಿದ ಪ್ರಗತಿ ವಿವರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್. ಗೊಂಬಿ ಮಾತನಾಡಿ ಪಟ್ಟಣದಲ್ಲಿನ ಉದ್ಯಾನವನಗಳ ಅಭಿವೃದ್ದಿಪಡಿಸುವುದು, ಪಟ್ಟಣದಲ್ಲಿ ಸಾರ್ವಜನಿಕ ಖಾಲಿ ಸ್ಥಳಗಳಲ್ಲಿ ಸಸಿಗಳ ನೆಟ್ಟು ಪರಿಸರ ರಕ್ಷಣೆಗೆ ಒತ್ತಾಯಿಸಿದರು. ಹಿರಿಯ ಈಶ್ವರ ಮುರಗೋಡ ಮಾತನಾಡಿ, ಪುರಸಭೆ ಆವರಣದ ಸ್ವಚ್ಛತೆ, ಗಾಂಧಿ ಸರ್ಕಲ್, ಬನಶಂಕರಿ ದೇವಸ್ಥಾನ ಹತ್ತಿರದ ಶೌಚಾಲಗಳ ದುರಸ್ತಿ, ಮಹಿಳಾ ಶೌಚಾಲಯಗಳ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಒತ್ತಾಯಿಸಿದರು. ಕಲಾವಿದ ಚನಮಲ್ಲ ಕರಡಿ ಮಾತನಾಡಿ, ಕೌಜಲಗಿ ನಿಂಗಮ್ಮ ಸಾಂಸ್ಕೃತಿಕ ಭವನ ಸರಿಯಾಗಿ ನಿರ್ವಹಣೆ ಮಾಡಿ, ಪುರಸಭೆಗೆ ಆದಾಯ ಮೂಲವನ್ನಾಗಿಸಿಕೊಳ್ಳಬೇಕು ಎಂದರು. ಸಿದ್ದೇಶ್ವರ ಸೋನಾರ ಮಾತನಾಡಿ ಕೆರೆ ಅಭಿವೃದ್ಧಿ, ವಾಕಿಂಗ್ ಟ್ರ್ಯಾಕ್ ನಿರ್ಮಾಣ, ಬೋಟಿಂಗ್ ವ್ಯವಸ್ಥೆ, ಸ್ಮಶಾನಗಳಿಗೆ ಕಾಂಪೌಂಡ್ ನಿರ್ಮಾಣ, ಪಟ್ಟಣದ ವೃತ್ತಗಳಿಗೆ ನಾಮಫಲಕ ಅಳವಡಿಸಲು ಆಗ್ರಹಿಸಿದರು. ಶಿವಾನಂದ ಹುಣಶ್ಯಾಳ ಸಾರ್ವಜನಿಕ ಶೌಚಾಲಯ ನಿರ್ಮಾಣ, ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣ, ಗಾಂಧಿ ವೃತ್ತದಲ್ಲಿನ ಶೌಚಾಲಯ ದುರಸ್ತಿಗೆ ಒತ್ತಾಯಿಸಿದರು. ಶಿವಲಿಂಗ ಟಿರಕಿ ಮಾತನಾಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ನಿರಂತರ ಅನುದಾನ ಒದಗಿಸಬೇಕು ಎಂದರು. ರಾಜೇಂದ್ರ ಮಾತನಾಡಿ ಪಟ್ಟಣದಲ್ಲಿನ ನೀರು ಪೋಲು ತಡೆಯುವದು, ಅಕ್ರಮ ನಳಗಳ ತೆರವು, ಹಳೆಪೈಪಲೈನಗಳ ದುರಸ್ತಿಗೆ ಬಜೆಟಿನಲ್ಲಿ ವಿಶೇಷ ಅನುದಾನ ಒದಗಿಸಬೇಕೆಂದರು. ಚೇತನ ಕಲಾಲ ಮಾತನಾಡಿ ಕೊಳಚೆ ಮಂಡಳಿಯಿಂದ ಕೆಂಗೇರಿಮಡ್ಡಿ, ಸಿಕ್ಕಗಾರ ಓಣ ಸೇರಿ ವಿವಿಧ ಭಾಗದಲ್ಲಿ ನಿರ್ಮಿಸಿದ ಮನೆಗಳಿಗೆ ಹಕ್ಕುಪತ್ರ ವಿತರಿಸಿ, ಅವರಿಂದ ಕಂದಾಯ ಪಡೆದು ಪುರಸಭೆಗೆ ಆದಾಯ ಮಾಡಿಕೊಳ್ಳುವದು, 24*7 ಕುಡಿಯುವ ನೀರಿನ ನಿರ್ವಹಣೆ, ಉದ್ಯಾವನ ಮತ್ತು ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸಬೇಕೆಂದರು. ಶಶಿಕಾಂತ ಮುಕ್ಕೆನ್ನವರ ಅಂಬೇಡ್ಕರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯಿಸಿದರು. ರಾಮು ಪಾತ್ರೋಟ ಮಾತನಾಡಿ ಪುರಸಭೆಯಿಂದ ವಿದ್ಯಾರ್ಥಿಗಳಿಗೆ ಅದರಲ್ಲೂ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವಿಗಾಗಿ ಬಜೆಟಿನಲ್ಲಿ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು. ಪುರಸಭೆ ಸದಸ್ಯ ಮುಸ್ತಾಕ ಚಿಕ್ಕೋಡಿ, ಹಿರಿಯ ಆರೋಗ್ಯ ನಿರೀಕ್ಷಕ ಮಹಾಲಿಂಗ ಮೂಗಳಖೋಡ, ಸಿಬ್ಬಂದಿ ರಾಜೇಶ್ವರಿ ಸೋರಗಾಂವಿ, ಸಾರ್ವಜನಿಕರಾದ ಆಕಾಶ ಮಾಂಗ, ಸಚಿನ ದೊಡಮನಿ, ಯಾಸೀನ ಬಳಗಾರ, ನಬಿ ಮುಲ್ಲಾ, ಕಲ್ಮೇಶ ದೊಡಮನಿ, ಸಚಿನ ಕಲಾಲ, ಲಕ್ಷ್ಮಣ ಮಾಂಗ, ಲಕ್ಷ್ಮಿ ಪರೀಟ ಸೇರಿ ಹಲವರು ಇದ್ದರು.

Share this article