ಕನ್ನಡಪ್ರಭ ವಾರ್ತೆ ಕಲಬುರಗಿ
ಸರ್ಕಾರದ ಆದೇಶ ದಿನಾಂಕ: 11.06.2024ರ ಪ್ರಕಾರ ಬೀದರ ಜಿಲ್ಲೆಯಲ್ಲಿ 98, ಬಳ್ಳಾರಿಯಲ್ಲಿ 119, ಕಲಬುರಗಿಯಲ್ಲಿ 234, ಕೊಪ್ಪಳದಲ್ಲಿ 131, ರಾಯಚೂರಿನಲ್ಲ್ಲಿ 190, ವಿಜಯನಗರದಲ್ಲಿ 142 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 94 ಸೇರಿದಂತೆ ಒಟ್ಟಾರೆ ವಿಭಾಗದ 1,008 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಅನುಮತಿ ದೊರೆತಿದೆ.
ಆರಂಭಿಕ ಹಂತದಿಂದಲೇ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಅರ್ಹ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ “ಆರಂಭಿಕ ಶಿಕ್ಷಣದ” ಸೌಲಭ್ಯವನ್ನು ಕಲ್ಪಿಸಿಕೊಡುವುದು ಸರ್ಕಾರದ ಅಭಿಲಾಷೆಯಾಗಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರಾಧೇಶಿಕ ಅಭಿವೃದ್ಧಿ ಮಂಡಳಿಯು ಸಹ “ಅಕ್ಷರ ಆವಿಷ್ಕಾರ್” ಕಾರ್ಯಕ್ರಮದ ಮೂಲಕ ಕೈಜೋಡಿಸಿದೆ.ಕಕ ಭಾಗದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಕಮ್ಮಿ: ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳು ನಡೆಯುತ್ತಿವೆ. ಅಲ್ಲಿ ದಾಖಲಾದ ಮಕ್ಕಳ ವಿವರಗಳನ್ನು ಅವಲೋಕಿಸಿದಾಗ, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅದರ ಸಂಖ್ಯೆ ತೀರಾ ಕಡಿಮೆ ಇದೆ ಎಂಬುದು ಅಂಕಿ-ಸಂಖ್ಯೆಗಳೇ ಸಾರುತ್ತಿವೆ.
ಇನ್ನು ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷ ವರೆಗಿನ ಮಕ್ಕಳ ದಾಖಲಾತಿ ಪ್ರಮಾಣ ನೋಡಿದಾಗ ಬೆಂಗಳೂರು ವಿಭಾಗದಲ್ಲಿ ಶೇ.40.94, ಧಾರವಾಡ ವಿಭಾಗದಲ್ಲಿ ಶೇ.61.61, ಮೈಸೂರು ವಿಭಾಗದಲ್ಲಿ ಶೇ.34.48 ಹಾಗೂ ಕಲಬುರಗಿ ವಿಭಾಗದಲ್ಲಿ ಅತಿ ಹೆಚ್ಚು ಶೇ.70.93 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂಗನವಾಡಿ ಮೇಲಿನ ಹೊರೆ ಸಹ ತಪ್ಪಲಿದೆ.
ಕೇಂದ್ರ ಅನುದಾನದ ನಿರೀಕ್ಷೆ: ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಕ್ರಿಯಾತ್ಮಕ ಚಟುವಟಿಕೆ ಸೇರಿದಂತೆ ಇನ್ನಿತರ ಮಾನದಂಡ ಅಧರಿಸಿ ಕೇಂದ್ರ ಸರ್ಕಾರವು ಅಂತಹ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರೊಜೆಕ್ಟ್ ಅಪ್ರೂವಲ್ ಬೋರ್ಡ್‍ನಿಂದ ಅನುಮೋದನೆ ನೀಡಿ ಹೆಚ್ಚಿನ ಅನುದಾನ ನೀಡುತ್ತದೆ. ಆ ಮೂಲಕ ರಾಜ್ಯದ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಲು ಸಹಕಾರಿಯಾಗುವುದಲ್ಲದೆ ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಅನುದಾನ ಸಹ ಬರಲಿದೆ ಎಂದು ಡಾ.ಆಕಾಶ ಎಸ್. ತಿಳಿಸಿದ್ದಾರೆ.ಅತಿಥಿ ಶಿಕ್ಷಕರ ಹಾಗೂ ಆಯಾಗಳ ನೇಮಕಾತಿ: ರಾಜ್ಯ ಸರ್ಕಾರ ಕಲಬುರಗಿ ವಿಭಾಗದ 1,008 ಆಯ್ದೆ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಂತಕ್ಕೆ ಶಾಲಾ ಹಂತದಲ್ಲಿಯೆ ನಿಯಮಾನುಸಾರ ಅತಿಥಿ ಶಿಕ್ಷಕರ ಮತ್ತು ಮಕ್ಕಳ ಪಾಲನೆಗೆ ಆಯಾ ನೇಮಕ ಮಾಡಿಕೊಳ್ಳಲಾಗುತ್ತದೆ.