ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕವುಂಟು ಮಾಡಿದೆ. ಒಂದು ಮತ್ತು ಎರಡನೇ ಅಲೆಯ ವೇಳೆ ಬರೋಬ್ಬರಿ 650 ಜನರನ್ನು ಬಲಿ ಪಡೆದಿದ್ದ ಕೋರಾನಾ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದ್ದು, ಆಸ್ಪತ್ರೆ ಮೂಲಸೌಲಭ್ಯಗಳನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ.
2020 ಮತ್ತು 21ನೇ ಸಾಲಿನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ವೇಳೆ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸೋಂಕಿತರ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಸಾವಿನ ಪ್ರಮಾಣದಲ್ಲಿ ಹಾವೇರಿ ಜಿಲ್ಲೆ ಮುಂಚೂಣಿಯಲ್ಲಿತ್ತು. ಒಂದು ಮತ್ತು ಎರಡನೇ ಅಲೆ ಸೇರಿ ಜಿಲ್ಲೆಯಲ್ಲಿ 20201 ಕೊರೋನಾ ಪಾಸಿಟಿವ್ ಕೇಸ್‌ಗಳು ಕಂಡುಬಂದಿದ್ದವು. ಇದು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಎನ್ನಬಹುದು. ಆದರೆ, ಇಷ್ಟೇ ಕೇಸ್‌ಗಳಲ್ಲಿ 650 ಜನರು ಪ್ರಾಣ ಕಳೆದುಕೊಂಡಿದ್ದರು ಎನ್ನುವುದು ಗಮನಾರ್ಹ ಅಂಶವಾಗಿದೆ.ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭವಾಗಿದ್ದರೂ ಇನ್ನೂ ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಕಂಡಿಲ್ಲ, ಜಿಲ್ಲಾಸ್ಪತ್ರೆ ಸೇರಿದಂತೆ ವೈದ್ಯಕೀಯ ಸೌಲಭ್ಯವೂ ಜಿಲ್ಲೆಯಲ್ಲಿ ಅಷ್ಟಕಷ್ಟೇ. ಹೀಗಾಗಿ ಕೊರೋನಾ ಅಬ್ಬರದ ಅಲೆಯಲ್ಲಿ ಸಕಾಲಕ್ಕೆ ಸರಿಯಾದ ಸಿಗದೇ ಅಪಾರ ಸಾವು ನೋವು ಕಂಡಿದ್ದ ಜಿಲ್ಲೆಯಲ್ಲಿ ಸದ್ಯಕ್ಕೆ ಕೊರೋನಾ ಸೋಂಕು ಪತ್ತೆಯಾಗಿಲ್ಲ, ಆದರೆ, ರಾಜ್ಯದ ಇತರೆಡೆ ಸೋಂಕಿನ ಪ್ರಕರಣಗಳು, ಸಾವು ಆಗುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬೆಲೆ ತೆರಬೇಕಾಗಬಹುದು ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸಾವಿನಲ್ಲಿ ಮುಂಚೂಣಿ:ಜಿಲ್ಲೆಯಲ್ಲಿ ಕೊರೋನಾ ಮೊದಲ ಅಲೆಗಿಂತ ಎರಡನೇ ಅಲೆಯು ಹೆಚ್ಚಿನ ಭಯ ಸೃಷ್ಟಿಸಿತ್ತು. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದರೂ ಸಾವಿನ ಪ್ರಮಾಣ ಮಾತ್ರ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿತ್ತು. ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ, ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯ ಸಿಗದೇ ೫೦೦ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಹಾವೇರಿ ಜಿಲ್ಲಾಸ್ಪತ್ರೆಯಲ್ಲೇ 194 ಜನರು ಕೊರೋನಾ ಗುಣಮುಖರಾಗದೇ ಕೊನೆಯುಸಿರೆಳೆದಿದ್ದರೆ, ಬ್ಯಾಡಗಿ ತಾಲೂಕಿನಲ್ಲಿ 59, ಹಾನಗಲ್ಲ ತಾಲೂಕಿನಲ್ಲಿ 69, ರಾಣಿಬೆನ್ನೂರು 144, ಹಿರೇಕೆರೂರು 78, ಸವಣೂರು 42, ಶಿಗ್ಗಾಂವಿ 57 ಹಾಗೂ ಇತರೆ 7 ಜನರು ಸೇರಿದಂತೆ 650 ಜನರು ಕೊರೋನಾಕ್ಕೆ ಬಲಿಯಾಗಿದ್ದರು. ಈಗ ಮತ್ತೆ ಕೊರೋನಾ ಅಲೆ ರಾಜ್ಯದಲ್ಲಿ ಶುರುವಾಗಿದ್ದು, ಜಿಲ್ಲೆಯಲ್ಲಿ ಹಿಂದಿನ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಮೇಲಿದೆ.ಮುಂಜಾಗ್ರತಾ ಕ್ರಮ:
ಈಗ ಮತ್ತೆ ರಾಜ್ಯದಲ್ಲಿ ಕೊರೋನಾ ಸಂಖ್ಯೆ ಹೆಚ್ಚುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕಾಸ್ಪತ್ರೆಗಳಲ್ಲಿ ಎಲ್ಲ ಸಿದ್ಧತೆ ಕೈಗೊಳ್ಳಲು ಮುಂದಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆಳಿಗೆ ಭೇಟಿ ನೀಡಿ ಆಕ್ಸಿಜನ್ ಕಾನ್ಸಂಟ್ರೇಟರ್, ವೆಂಟಿಲೇಟರ್, ಐಸಿಯು, ಬೆಡ್ ವ್ಯವಸ್ಥೆ ಪರಿಶೀಲನೆ ನಡೆಸಿ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ. ಕಳೆದ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿದ್ದ ಆಕ್ಸಿಜನ್ ಘಟಕ, ಆರ್‌ಟಿಪಿಸಿಆರ್ ಲ್ಯಾಬ್, ೪೪ ವೆಂಟಿಲೇಟರ್ಸ್, ೫ ಐಸಿಯು, ೮೫ ಆಕ್ಸಿಜನ್ ಕಾನ್ಸಂಟ್ರೇಟರ್ಸ್, ೧೩೦ ಸಿಲಿಂಡರ್ ಜೊತೆಗೆ ಲಿಕ್ಲಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಟ್ಯಾಂಕ್ ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತ ಪಡಿಸಿಕೊಂಡು ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ.ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಕೇಸ್ ಪತ್ತೆಯಾಗದಿದ್ದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ೬೦ ವರ್ಷ ಮೇಲ್ಪಟ್ಟವರು, ಕಿಡ್ನಿ ಸಮಸ್ಯೆಯಿಂದ ಬಳಲುವವರು, ಗರ್ಭೀಣಿಯರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಲಹೆ ನೀಡುತ್ತಿದೆ.
ಮೊದಲೆರಡು ಅಲೆಯಲ್ಲಿ 22201 ಕೋವಿಡ್ ಕೇಸ್:ಜಿಲ್ಲೆಯಲ್ಲಿ ಮೊದಲೆರಡು ಅಲೆಯ ವೇಳೆ 22201 ಕೋವಿಡ್ ಕೇಸ್‌ಗಳು ಪತ್ತೆಯಾಗಿದ್ದವು. ರಾಣಿಬೆನ್ನೂರು ತಾಲೂಕಿನಲ್ಲಿ ಅತ್ಯಧಿಕ 5352 ಜನರಿಗೆ ಕೊರೋನಾ ತಗಲಿತ್ತು. ಹಾವೇರಿ ತಾಲೂಕಿನಲ್ಲಿ 4847 ಕೇಸ್ ದೃಢಪಟ್ಟಿದ್ದರೆ, ಬ್ಯಾಡಗಿ ತಾಲೂಕಿನಲ್ಲಿ 2060, ಹಾನಗಲ್ಲ ತಾಲೂಕಿನಲ್ಲಿ 2803, ಹಿರೇಕೆರೂರು ತಾಲೂಕಿನಲ್ಲಿ 3061, ಸವಣೂರು ತಾಲೂಕಿನ 1306 ಜನರಿಗೆ, ಶಿಗ್ಗಾಂವಿ ತಾಲೂಕಿನ 2542 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇತರೆ 230 ಕೇಸ್ ದಾಖಲಾಗಿದ್ದವು.ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪೂರೈಸಲಾಗಿದ್ದ ಸಲಕರಣೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಕೇಸ್ ಪತ್ತೆಯಾಗಿಲ್ಲ. ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ
ಡಿಎಚ್‌ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ.