ಕುಡಿವ ನೀರಿನ ಕೊರತೆ ಎದುರಿದಲು ಮುಂಜಾಗ್ರತಾ ಕ್ರಮ: ಶಾಸಕ ಮಾನೆ

KannadaprabhaNewsNetwork | Published : Jan 19, 2024 1:49 AM

ಸಾರಾಂಶ

ನೀರಿನ ಕೊರತೆ ಎದುರಾಗಲಿರುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಮುಂಬರುವ ಬೇಸಿಗೆ ಕಾಲದಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗದಂತೆ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೀರಿನ ಕೊರತೆ ಎದುರಾಗಲಿರುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ₹೩.೮೭ ಕೋಟಿ ವೆಚ್ಚದಲ್ಲಿ ಮನೆ, ಮನೆಗೆ ಗಂಗೆ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಅವರು, ನೀರಿನ ಸಮಸ್ಯೆ ಕಂಡು ಬರುವ ಗ್ರಾಮಗಳಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಾಡಿಗೆ ಆಧಾರದಲ್ಲಿ ನೀರು ಪೂರೈಸಲು ಈಗಾಗಲೇ ಖಾಸಗಿ ಕೊಳವೆ ಬಾವಿಗಳನ್ನೂ ಸಹ ಗುರುತಿಸಲಾಗಿದೆ. ಮಳೆ ಕೊರತೆಯ ಕಾರಣದಿಂದ ಈ ವರ್ಷ ಹೆಚ್ಚಿನ ಸಮಸ್ಯೆ ಮತ್ತು ಸವಾಲು ಎದುರಿಸಬೇಕಿದ್ದು, ತಾಲೂಕಾಡಳಿತ ಸಜ್ಜಾಗಿದೆ ಎಂದು ತಿಳಿಸಿದರು.

ಮಹತ್ವಾಕಾಂಕ್ಷೆಯ ಮನೆ, ಮನೆಗೆ ಗಂಗೆ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕಾಳಜಿ ವಹಿಸಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಅಲ್ಲಲ್ಲಿ ಅಗೆದಿರುವ ರಸ್ತೆ ಸರಿಪಡಿಸದೇ ಇರುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸುವಂತೆ ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಬಾಬಾಜಾನ್ ಬಂಕಾಪೂರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಫಕ್ಕೀರಪ್ಪ ಮುಂಡರಗಿ, ನಾಗಪ್ಪ ವಡ್ಡರ, ಸಾವಕ್ಕ ತರದಳ್ಳಿ, ಅಕ್ಕಮ್ಮ ಗಂಟೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಚನ್ನಪ್ಪ ದೊಡ್ಡಚಿಕ್ಕಣ್ಣನವರ, ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಫಕ್ಕೀರಪ್ಪ ಹುರುಳಿಕುಪ್ಪಿ, ಗುಡ್ಡಪ್ಪ ಬ್ಯಾಗವಾದಿ, ಆರ್.ಸಿ. ಹಿರೇಮಠ, ಕರಿಯಪ್ಪ ಗಂಟೇರ, ಸಿದ್ದು ಕಲ್ಲಣ್ಣನವರ, ಶಿವಪ್ಪ ಹುರುಳಿಕುಪ್ಪಿ, ರಾಮಪ್ಪ ದೊಡ್ಡಮನಿ ಈ ಸಂದರ್ಭದಲ್ಲಿದ್ದರು.

Share this article