ಹೊಸಪೇಟೆ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯ ಒಟ್ಟು 6 ತಾಲೂಕುಗಳನ್ನು ಸರ್ಕಾರವು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.
ಬರಗಾಲ ನಿರ್ವಹಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ 13 ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದ ಸಭೆ ನಡೆಸಿ ಚರ್ಚಿಸಲಾಗಿದೆ. 2023ರ ನವೆಂಬರ್ 6ರಂದು ಸರ್ಕಾರ ಹೊರಡಿಸಿದ ಆದೇಶದನ್ವಯ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬರಗಾಲ ನಿರ್ವಾಹಣೆಗಾಗಿ ಮುಂಜಾಗ್ರತ ಕ್ರಮಗಳ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ತಾಲೂಕು ಟಾಸ್ಕ್ ಪೋರ್ಸ್‌ನ 19 ಸಭೆಗಳನ್ನು ಕೂಡ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2ಲಕ್ಷ ಮೆಟ್ರಿಕ್ ಟನ್ ಮೇವು: ಜಿಲ್ಲೆಯಲ್ಲಿ 2,92,330 ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಇದನ್ನು 18 ವಾರಗಳವರೆಗೆ ಉಪಯೋಗಿಸಬಹುದು. ಪಶು ಸಂಗೋಪನೆ ಇಲಾಖೆಯಿಂದ ಈಗಾಗಲೇ ಜಿಲ್ಲೆಗೆ 12,057 ಮೇವಿನ ಮಿನಿಕಿಟ್ ಸರಬರಾಜಾಗಿದೆ. ಎಲ್ಲ ಕಿಟ್‌ಗಳನ್ನು 12,044 ರೈತರಿಗೆ ವಿತರಿಸಲಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತಾರಾಜ್ಯ ಮೇವು ಸಾಗಾಣಿಕೆ ನಿರ್ಬಂಧಿಸಲಾಗಿದೆ. ಮೇವು ಖರೀದಿಸಲು 85 ರೈತರು ಟೆಂಡರ್ ಮುಖಾಂತರ ಮೇವು ಮಾರಾಟ ಮಾಡಲು ಮುಂದೆ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ನೀರಿನ ಸಮಸ್ಯೆ ಸಂಭವನೀಯ: ಜಿಲ್ಲೆಯ 333 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೊಸಪೇಟೆ ತಾಲೂಕಿನಲ್ಲಿ 30 ಗ್ರಾಮ, 15 ವಾರ್ಡ್‌ಗಳಲ್ಲಿ, ಹಡಗಲಿ-50 ಗ್ರಾಮ, ಹಗರಿಬೊಮ್ಮನಹಳ್ಳಿ- 43 ಗ್ರಾಮ, 4 ವಾರ್ಡ್, ಹರಪನಹಳ್ಳಿ-128 ಗ್ರಾಮ, 27 ವಾರ್ಡ್, ಕೊಟ್ಟೂರು- 21 ಗ್ರಾಮ, ಕೂಡ್ಲಿಗಿ- 61 ಗ್ರಾಮ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 333 ಗ್ರಾಮಗಳು, 46 ವಾರ್ಡ್‌ಗಳಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉದ್ಭವಿಸಬಹುದು ಎಂದು ಗುರುತಿಸಲಾಗಿದೆ.ಖಾಸಗಿ ಬೋರ್‌ವೆಲ್ ಮುಖಾಂತರ ಈಗಾಗಲೇ ಜಿಲ್ಲೆಯಲ್ಲಿ 67 ಗ್ರಾಮಗಳಲ್ಲಿ 73 ಖಾಸಗಿ ಕೊಳವೆಬಾವಿಗಳ ಮುಖಾಂತರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ತಾಲೂಕು ಮಟ್ಟಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ತಹಸೀಲ್ದಾರರ ಮತ್ತು ಕುಡಿಯುವ ನೀರಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ಮಾಡಿ ಸಮಸ್ಯೆಯಿರುವ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿವಾರ ನಿಯಮಿತ ಪರಿಶೀಲನೆ ನಡೆಸಿ ಬರ ಪರಿಸ್ಥಿತಿಯ ಬಗ್ಗೆ ಮತ್ತು ನೀರಿನ ಕೊರತೆ ನೀಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಸಹಾಯವಾಣಿ: ಕುಡಿಯುವ ನೀರು ಪೂರೈಕೆಗೆ ಮನವಿ ಬಂದ 24 ಗಂಟೆಯೊಳಗಾಗಿ ಕಡ್ಡಾಯವಾಗಿ ಸ್ಪಂದಿಸಬೇಕು ಎಂದು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಾರ್ಯಾಲಯ ಮತ್ತು ಎಲ್ಲ ತಹಸೀಲ್ದಾರರ ಕಚೇರಿಯಲ್ಲಿ ಬರಗಾಲ ಎದುರಿಸುವ ಸಂಬಂಧ ಸಹಾಯವಾಣಿ ಆರಂಭಿಸಲಾಗಿದೆ. ತಾಲೂಕು ಸಹಾಯವಾಣಿ ಸಂಖ್ಯೆಗಳಾದ ಹೊಸಪೇಟೆ: 08394-224208, ಹಗರಿಬೊಮ್ಮನಹಳ್ಳಿ-08397-238255, ಕೂಡ್ಲಿಗಿ: 08391-220225, ಕೊಟ್ಟೂರು: 08391-225400, ಹಡಗಲಿ: 08399-240238, ಹರಪನಹಳ್ಳಿ: 08398-286260, 8095258337ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.