ಜನಸ್ನೇಹಿ, ಪಾರದರ್ಶಕ ಆಡಳಿತಕ್ಕೆ ಆದ್ಯತೆ

KannadaprabhaNewsNetwork |  
Published : Jun 30, 2024, 12:47 AM IST
454 | Kannada Prabha

ಸಾರಾಂಶ

ಜಿಲ್ಲಾಮಟ್ಟದಲ್ಲಿ ಐದು ಜನಸಂಪರ್ಕ ಸಭೆ ಜರುಗಿಸಿ, ಜನರ ಅಹವಾಲು ಸ್ವೀಕರಿಸಿ ಶೇ. 75ರಷ್ಟು ದೂರುಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಇನ್ನುಳಿದವುಗಳು ಸರ್ಕಾರ, ಇಲಾಖೆಗಳ ಹಂತದಲ್ಲಿ ಆಗಬೇಕಿದೆ ಮತ್ತು ಕೆಲವು ನ್ಯಾಯಾಲಯ ಪ್ರಕರಣಗಳು ಇವೆ.

ಕಲಘಟಗಿ:

ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಬೇಕು-ಬೇಡಿಕೆಗಳಿಗೆ ಸ್ಪಂದಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಮಟ್ಟದಲ್ಲಿ ಐದು ಜನಸಂಪರ್ಕ ಸಭೆ ಜರುಗಿಸಿ, ಜನರ ಅಹವಾಲು ಸ್ವೀಕರಿಸಿ ಶೇ. 75ರಷ್ಟು ದೂರುಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಇನ್ನುಳಿದವುಗಳು ಸರ್ಕಾರ, ಇಲಾಖೆಗಳ ಹಂತದಲ್ಲಿ ಆಗಬೇಕಿದೆ ಮತ್ತು ಕೆಲವು ನ್ಯಾಯಾಲಯ ಪ್ರಕರಣಗಳು ಇವೆ. ಇವುಗಳನ್ನು ಹಂತ-ಹಂತವಾಗಿ ಪರಿಹರಿಸುವುದಾಗಿ ಸಚಿವರು ತಿಳಿಸಿದರು.

263ಕ್ಕೂ ಹೆಚ್ಚು ಅರ್ಜಿ ಸ್ವೀಕೃತ:

ಕಾರ್ಯಕ್ರಮದಲ್ಲಿ ಒಟ್ಟು 263ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು ಶೇ. 40ರಷ್ಟು ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಉಳಿದಂತೆ ಬಹುತೇಕ ಅರ್ಜಿಗಳು ವಾಸಕ್ಕೆ ಮನೆ, ಜಮೀನು ಸರ್ವೇ, ಫೌತಿ, ಪೊಡಿಗಾಗಿ ಅರ್ಜಿ ಸಲ್ಲಿಕೆ ಆಗಿವೆ. ಇವುಗಳನ್ನು ಸಹ ಮುಂದಿನ ದಿನಗಳಲ್ಲಿ ನಿಯಮಾನುಸಾರ, ಕಾನೂನುಬದ್ಧವಾಗಿ ಪರಿಶೀಲಿಸಿ, ಇತ್ಯರ್ಥಪಡಿಸಲಾಗುವುದು ಎಂದರು.

ಕಣ್ಣೀರಾದ ಸಚಿವ:

ವಯಸ್ಕ ಮಗ ವಿಶೇಷಚೇತನನಿದ್ದು ಏಳಲು, ಅಡ್ಡಾಡಲು ಆಗುವುದಿಲ್ಲ. ಮಗನನ್ನು ಸಾಕಲು ಸಹಾಯ ಮಾಡಿ ಎಂದು ತಾಲೂಕಿನ ದೇವಿಕೊಪ್ಪ ಗ್ರಾಮದ

ವಿಶೇಷಚೇತನ ನಾಗರಾಜ ತಾಯಿ ಕಸ್ತೂರಿ ತುಂಬ್ರಿಕೊಪ್ಪ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು. ಅವರ ಪರಿಸ್ಥಿತಿ ನೋಡಿ ಕಣ್ಣೀರಾದ ಸಚಿವರು, ತಮ್ಮ ಫೌಂಡೇಶನ್‌ ವತಿಯಿಂದ ಸಹಾಯ ಮಾಡುವ ಭರವಸೆ ನೀಡಿದರು. ಜತೆಗೆ ಆರೋಗ್ಯ, ಅಂಗವಿಕಲ ಕಲ್ಯಾಣ ಇಲಾಖೆಯಿಂದ ಯೋಜನಗಳ ಸಹಾಯ ಮಾಡಿಸುವುದಾಗಿ ತಿಳಿಸಿದರು. ಅಗತ್ಯ ಚಿಕಿತ್ಸೆ, ಔಷಧಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕೆವೈಸಿ ಅಭಿಯಾನ ಮಾಡಿ:

ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಪ್ರಕರಣಗಳಲ್ಲಿ ಆಧಾರ್‌ ಜೋಡಣೆ ಮತ್ತು ಬ್ಯಾಂಕ್‌ ಹೊಸ ಖಾತೆ ತೆರೆಯಲು ಅನುಕೂಲವಾಗುವಂತೆ ಆಯ್ದ ನಗರ ಹಾಗೂ ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆ ಸಲುವಾಗಿ ಜು. 1ರಿಂದ 7ರ ವರೆಗೆ ಸಪ್ತಾಹ ಅಭಿಯಾನ ಜಿಲ್ಲೆಯಲ್ಲಿ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಸರ್ಕಾರದ ಆಶಯದಂತೆ ಜನಸ್ನೇಹಿ, ಜನಪರ ಆಡಳಿತ ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ. ತಾಲೂಕು, ಇಲಾಖೆಗಳ ಹಂತದಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ಸಿಗದಿದಲ್ಲಿ ಜನರು ಜಿಲ್ಲಾಡಳಿತಕ್ಕೆ ಸಂಪರ್ಕಿಸಬಹುದು ಎಂದರು.

ಜನಸ್ಪಂದನ ಸಭೆಗಳಲ್ಲಿ ಸ್ವೀಕರಿಸುವ ಸಾರ್ವಜನಿಕ ಅರ್ಜಿಗಳನ್ನು ಜು. 15ರೊಳಗೆ ವಿಲೇವಾರಿ ಮಾಡಲಾಗುವುದು ಎಂದು ಇದೇ ಜಿಲ್ಲಾಧಿಕಾರಿ ತಿಳಿಸಿದರು.

ಕಳೆದ ನಾಲ್ಕೈದು ತಿಂಗಳು ಬಾಧಿಸಿದ್ದ ಬರಗಾಲದ ವೇಳೆ ರೈತರ ಮನವಿಗೆ ಸ್ಪಂದಿಸಿ, ಜನ, ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು, ಮೇವು ಬ್ಯಾಂಕ್ ತೆರೆದ ಜಿಲ್ಲಾಧಿಕಾರಿಯನ್ನು ಇದೇ ವೇಳೆ ವಿವಿಧ ರೈತ ಸಂಘಟನೆಗಳ ಪ್ರಮುಖರು, ರೈತರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಡಾ.ಗೋಪಾಲ ಬ್ಯಾಕೋಡ, ತಾಲೂಕು ಉಸ್ತುವಾರಿ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶ್ಯಾನಪ್ಪಗೌಡ ಪಾಟೀಲ, ತಾಲೂಕು ಅಧ್ಯಕ್ಷ ಬಸವರಾಜ ಬಾವಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ