ಹುಬ್ಬಳ್ಳಿ: ಹೊಟ್ಟೆಯಲ್ಲಿಯೇ ಮಗು ತೀರಿಕೊಂಡು ತೀವ್ರ ಅನಾರೋಗ್ಯಕ್ಕೀಡಾಗಿ ಸೋಮವಾರ ಮಧ್ಯಾಹ್ನ ಕೆಎಂಸಿಆರ್‌ಐಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಪತಿ ಕೂಡಾ ಆಸ್ಪತ್ರೆ ಆವರಣದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕಿನ ರಾಧಿಕಾ ಗಡ್ಡಿಹೊಳಿ (19) ಚಿಕಿತ್ಸೆ ಫಲಿಸದೇ ಮೃತಪಟ್ಟ ಗರ್ಭಿಣಿ.ಮಹಿಳೆಗೆ ಪೀಟ್ಸ್ ಬರುತ್ತಿತ್ತು. ಎಂಟು ತಿಂಗಳು ಗರ್ಭೀಣಿಯಾಗಿದ್ದ ಈಕೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಬೆಳಗಾವಿಯ ಖಾಸಗಿ, ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಆಗಿದ್ದರಿಂದ ಹೊಟ್ಟೆಯಲ್ಲೇ ಮಗು ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿಆರ್‌ಐಗೆ ಕರೆದುಕೊಂಡು ಬರಲಾಗಿತ್ತು.
ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಚಿಕಿತ್ಸೆ ಫಲಿಸದೇ ಈಕೆ ಮೃತಪಟ್ಟಿದ್ದಾಳೆ.ಈ ಕುರಿತು ಮಾಹಿತಿ ನೀಡಿದ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಮಹಿಳೆ ಕೆಎಂಸಿಆರ್‌ಐಗೆ ದಾಖಲಾದ ವೇಳೆ ತೀವ್ರ ಉಸಿರಾಟ ತೊಂದರೆ ಹಾಗೂ ಬಿಪಿ ಏರುಪೇರಿನಿಂದ ಹೃದಯ ಸ್ತಂಭನ ಉಂಟಾಗಿತ್ತು. ಅಲ್ಲದೇ, ಬೆಳಗಾವಿಯಲ್ಲಿಯೇ ಹೊಟ್ಟೆಯಲ್ಲಿದ್ದ ಮಗು ತೀರಿಕೊಂಡು ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗಿತ್ತು. ಈ ಮಧ್ಯೆಯೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಟ್ಟು ಬದುಕಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಪತ್ನಿ ಹಾಗೂ ಆಕೆಯ ಹೊಟ್ಟೆಯಲ್ಲಿನ ಮಗು ತೀರಿಕೊಂಡ ಆಘಾತದಲ್ಲಿ ಆಕೆಯ ಪತಿ ಮಲ್ಲೇಶಿ ಗಡ್ಡಿಹೊಳಿ ವಿಷ ಸೇವನೆ ಮಾಡಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ. ಸದ್ಯ ಅವರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಹೇಳಿದರು.