ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಿ

KannadaprabhaNewsNetwork | Published : Sep 14, 2024 1:49 AM

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ಆಹಾರದ ಪೌಷ್ಟಿಕತೆಯನ್ನು ನಿರೀಕ್ಷಿಸುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಆಹಾರದಲ್ಲಿ ಪೌಷ್ಟಿಕತೆಯನ್ನು ಕಾಪಾಡಿಕೊಂಡರೆ ಮಗುವಿನ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇಂದಿನ ಆಧುನಿಕ ಯುಗದಲ್ಲಿ ಆಹಾರದ ಪೌಷ್ಟಿಕತೆಯನ್ನು ನಿರೀಕ್ಷಿಸುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಆಹಾರದಲ್ಲಿ ಪೌಷ್ಟಿಕತೆಯನ್ನು ಕಾಪಾಡಿಕೊಂಡರೆ ಮಗುವಿನ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಬೆಳಗುಂಬ ಗ್ರಾಪಂ ಅಧ್ಯಕ್ಷ ವೇದಾನಂದಮೂರ್ತಿ ಸಲಹೆ ನೀಡಿದರು.

ತಾಲೂಕಿನ ಪನ್ನಸಮುದ್ರದಲ್ಲಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವೆಲ್ಲರೂ ಸೇವಿಸುತ್ತಿರುವ ಆಹಾರದಲ್ಲಿ ಪೌಷ್ಟಿಕತೆ ಹಾಗೂ ಗುಣಮಟ್ಟ ಇಲ್ಲದೆ ಇರುವುದರಿಂದ ಜನಿಸುವ ಮಕ್ಕಳಲ್ಲೂ ಕೂಡ ಅಪೌಷ್ಟಿಕತೆ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆಗೆ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಗುಣಮಟ್ಟದ ಪೌಷ್ಟಿಕತೆವುಳ್ಳ ಆಹಾರ ಸೇವನೆಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಜನಿಸುವ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಕಾಡುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ವಿತರಣೆಯಾಗುವ ಪೌಷ್ಟಿಕ ಆಹಾರವನ್ನು ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರು ಸೇವಿಸಿದರೆ ಆರೋಗ್ಯವಂತ ಮಗು ಹಾಗೂ ಆರೋಗ್ಯಕರ ಸಮಾಜ ನಿರೀಕ್ಷಿಸಲು ಸಾಧ್ಯವಾಗುತ್ತದೆ ಎಂದರು.

ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಕರಮೂರ್ತಿ ಮಾತನಾಡಿ, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಉತ್ತಮ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಪೋಷಣ್ ಮಾಸಾಚರಣೆ ಅಭಿಯಾನವನ್ನು ಹಮ್ಮಿಕೊಂಡಿದೆ. ಮಹಿಳೆಯರು ಅದರಲ್ಲೂ ವಿಶೇಷವಾಗಿ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಬಾಲ್ಯ ವಿವಾಹ ತಡೆ ಕಾಯ್ದೆ ಜಾರಿಯಲ್ಲಿದ್ದು, ಇದರ ಮಹತ್ವವನ್ನು ಎಲ್ಲರೂ ಅರಿಯಬೇಕು. ಮನೆ ಮತ್ತು ಶಾಲೆಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೊಬೈಲ್ ಫೋನ್ ಸಿಗದಂತೆ ಹಾಗೂ ಹೆಚ್ಚು ಸಮಯ ಅವರು ಮೊಬೈಲ್‌ನಲ್ಲೇ ಕಾಲ ಕಳೆಯದಂತೆ ಎಚ್ಚರಿಕೆ ವಹಿಸಬೇಕು. ಬಾಲ್ಯ ವಿವಾಹಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ. ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಬೇಕು ಎಂದರು.

ಮಹಿಳೆಯರು, ಕುಟುಂಬ ಮತ್ತು ಸಮಾಜವನ್ನು ತಿದ್ದುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಅವರು ಆರೋಗ್ಯವಂತರಾಗಿರಲು ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ನೈಸರ್ಗಿಕವಾಗಿ ಸಿಗುವ ತಾಜಾ ತರಕಾರಿ ಮತ್ತು ಹಣ್ಣುಗಳು, ಸೊಪ್ಪು ದ್ವಿದಳ ಧಾನ್ಯಗಳನ್ನು ನಿತ್ಯ ತಮ್ಮ ಆಹಾರದಲ್ಲಿ ಸೇವಿಸಬೇಕು. ಗರ್ಭಿಣಿಯರು ಉತ್ತಮ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಗಮನಹರಿಸಬೇಕು ಎಂದರು.

ಬೆಳಗುಂಬ ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಸಂಯೋಜಕ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯ ರೇಣುಕಮ್ಮ, ಲೀಲಾವತಿ, ಮೇಲ್ವಿಚಾರಕಿ ಭಾರತಿ, ರಾಧಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article