ಗರ್ಭಿಣಿಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ

KannadaprabhaNewsNetwork |  
Published : Dec 29, 2024, 01:17 AM IST
ಬಳ್ಳಾರಿ ತಾಲೂಕಿನ ರೂಪನಗುಡಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೈ.ರಮೇಶ್ ಬಾಬು ಅವರು ಗರ್ಭಿಣಿಯರ ಆರೋಗ್ಯ ವಿಚಾರಿಸಿದರು.  | Kannada Prabha

ಸಾರಾಂಶ

ಗಂಡಾಂತರ ಗರ್ಭಿಣಿಯರು ಎಂದು ಗುರುತಿಸಿದ ಬಳಿಕ ಅವರ ಆರೋಗ್ಯದ ಕಡೆ ವಿಶೇಷ ಕಾಳಜಿ ವಹಿಸಬೇಕು.

ಬಳ್ಳಾರಿ: ಗರ್ಭಿಣಿಯರ ಆರೈಕೆ ಮಹತ್ವ ಕುರಿತು ನಿರಂತರವಾಗಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡುವ ಮೂಲಕ ಶಿಶು ಮರಣ ಹಾಗೂ ತಾಯಿ ಮರಣ ತಡೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶಬಾಬು ತಿಳಿಸಿದರು.

ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಕೈಗೊಂಡು ತಾಯಂದಿರೊಂದಿಗೆ ಮಾತನಾಡಿದರು.

ಗಂಡಾಂತರ ಗರ್ಭಿಣಿಯರು ಎಂದು ಗುರುತಿಸಿದ ಬಳಿಕ ಅವರ ಆರೋಗ್ಯದ ಕಡೆ ವಿಶೇಷ ಕಾಳಜಿ ವಹಿಸಬೇಕು. ಅಧಿಕ ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿ-ಜವಳಿ ಗರ್ಭಿಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಜೇರಿಯನ್‌ ಮುಂತಾದ ಕಾರಣಗಳಿದ್ದರೆ ನಿರ್ಲಕ್ಷಿಸಬಾರದು. ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಿಂದ ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್‌ ಮಾಡಿಸಿ. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಠ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಿ ಎಂದು ಸಲಹೆ ನೀಡಿದರು.

ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸು ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು. ರಕ್ತಹೀನತೆ ಎಂದು ಕಂಡು ಬಂದಲ್ಲಿ ಐರನ್‌ ಸುಕ್ರೋಸ್‌ 200 ಮಿಲಿ ಗ್ರಾಂ ಪ್ರತಿ ಮೂರು ದಿನಕ್ಕೊಮ್ಮೆ 5 ಇಂಜೆಕ್ಷನ್‌ ಕೊಡಿಸಬೇಕು. ಆಹಾರದಲ್ಲಿ ಸ್ಥಳೀಯವಾಗಿ ದೊರಕುವ ತರಕಾರಿ, ತಪ್ಪಲು ಪಲ್ಯ, ಹಣ್ಣುಗಳನ್ನು ಹೆಚ್ಚು ಸೇವಿಸಲು ತಿಳಿಸಿಬೇಕು. ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿವಾರ ಚರ್ಚಿಸಬೇಕು.

ಆಕಸ್ಮಿಕ ಘಟನೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಯಾರು ಇಲ್ಲದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಹಬ್ಬ, ಜಾತ್ರೆ, ಊರ ದೇವರ ಪೂಜೆ, ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಡಾ.ನಾರಾಯಣ ಬಾಬು, ಡಾ.ಪ್ರಿಯಾಂಕ, ಶುಶ್ರೂಷಣಾಧಿಕಾರಿ ಪ್ರೇಮಾ, ಅನ್ನಪೂರ್ಣ ಸೇರಿದಂತೆ ಸಿಬ್ಬಂದಿಯವರು ತಾಯಂದಿರು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ