ಸಂಡೂರು: ಮಹಿಳೆಯರು ಶಕ್ತಿ ಸ್ವರೂಪಿಣಿಯರು. ಸೌಟು ಹಿಡಿಯುವ ಕೈ ಇಂದು ಅಂತರಿಕ್ಷದವರೆಗೆ ಚಾಚಿದೆ. ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬ ಶಿಕ್ಷಣ ಪಡೆದಂತೆ. ಮಹಿಳೆಯರ ಕನಸುಗಳನ್ನು ಒಸಕಿಹಾಕದೆ, ಪ್ರೋತ್ಸಾಹಿಸಬೇಕು ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಅಭಿಪ್ರಾಯಪಟ್ಟರು.
ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಮಹಿಳೆಯರ ಅಹವಾಲು ಸ್ವೀಕಾರಕ್ಕೆ ಮೀಸಲಿಟ್ಟಿದ್ದೇನೆ. ಹಿಂದಿನ ವರ್ಷ ನೀಡಿದ್ದ ಭರವಸೆಯಂತೆ ಆರ್ಥಿಕ ತೊಂದರೆಯಿಂದ ಅರ್ಧಕ್ಕೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿದ್ದ ತಾಲ್ಲೂಕಿನ ಸುಮಾರು ೧೦-೧೫ ಮಹಿಳೆಯರು ಪುನಾ ತಮ್ಮ ಶಿಕ್ಷಣವನ್ನು ಮುಂದುವರೆಸಲು ಅನುಕೂಲ ಕಲ್ಪಿಸಿಕೊಡಲಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಎಸ್ಸಿ ನರ್ಸಿಂಗ್ ಕಾಲೇಜು ತಾಲ್ಲೂಕಿನಲ್ಲಿ ಆರಂಭವಾಗಲಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಎಸ್ಪಿ ಡಾ.ಸುಮನ್, ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿ, ತಮ್ಮ ಛಾಪನ್ನು ಮೂಡಿಸಿದ್ದಾರೆ. ನಾನು ಈಗಿರುವ ಸ್ಥಾನಕ್ಕೆ ಬರಲು ತಂದೆತಾಯಿಗಳು, ಬೆಳೆದು ಬಂದ ಪರಿಸರ ಹಾಗೂ ಗುರುಗಳು ನೀಡಿದ ಪ್ರೋತ್ಸಾಹ ಕಾರಣ ಎಂದರು.ಸಾಹಿತಿ ಪ್ರತಿಭಾ ನಂದಕುಮಾರ್ ಉಪನ್ಯಾಸ ನೀಡಿ, ಸಂಡೂರು ವಿಧಾನಸಭಾ ಕ್ಷೇತ್ರ ಮಹಿಳಾ ಮತದಾರರೇ ಹೆಚ್ಚಿರುವ ಕ್ಷೇತ್ರವಾಗಿರುವುದು ವಿಶೇಷ. ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಥೀಮ್ ಗಿವ್ ಟು ಗೇನ್. ಇದರರ್ಥ ಮಹಿಳೆಯರಿಗೆ ಶಿಕ್ಷಣ, ತರಬೇತಿ, ಗೌರವ, ಸಹಕಾರ, ಜ್ಞಾನ, ಆರ್ಥಿಕ ಬೆಂಬಲ, ನ್ಯಾಯ, ಸಂಪನ್ಮೂಲ, ರಕ್ಷಣೆ ನೀಡಿದರೆ, ಅವರಿಂದ ಸಮಾಜಕ್ಕೆ ಉತ್ತಮವಾದದ್ದನ್ನು ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಉಪಾಧ್ಯಕ್ಷ ಎಚ್.ಲಕ್ಷ್ಮಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ನೂರುದ್ದೀನ್, ಸದಸ್ಯೆ ಪದ್ಮಾ, ಐಶ್ವರ್ಯ ಅಕ್ಷಯ್ ಲಾಡ್, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ತಾಲ್ಲೂಕು ಪಂಚಾಯ್ತಿ ಇಒ ಮಡಗಿನ ಬಸಪ್ಪ, ಅರಕ್ಷಕ ವೃತ್ತ ನಿರೀಕ್ಷಕ ಮಹೇಶ್‌ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್‌ಗೌಡ, ಗ್ರೇಡ್ ೨ ತಹಶೀಲ್ದಾರ್ ಸುಧಾ ಅರಮನೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್, ಡಾ. ವಲಿಬಾಷ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.