- ಸೀತೂರು ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಫಲಾನುಭವಿಗಳ ಆಯ್ಕೆಗೆ ವಿಶೇಷ ಗ್ರಾಮ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸೀತೂರು ಗ್ರಾಮ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕೆರೆಗದ್ದೆಯಲ್ಲಿ 4 ಎಕರೆ ಜಾಗದಲ್ಲಿ 96 ನಿವೇಶನದ ಬಡಾವಣೆ ಸಿದ್ಧವಾಗಿದ್ದು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲು ವಿಶೇಷ ಗ್ರಾಮ ಸಭೆಯಲ್ಲಿ ಅಂಗೀಕಾರವಾಗಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್ ತಿಳಿಸಿದರು.
ಶುಕ್ರವಾರ ಸೀತೂರಿನ ವಿಎಸ್.ಎಸ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಯಿಂದ ನಿವೇಶನ ಹಂಚಲು ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಕಂದಾಯ ಭೂಮಿಯೇ ಕಡಿಮೆಯಾಗಿದೆ. ಎಲ್ಲಾ ಭೂಮಿ ಕಿರು ಅರಣ್ಯ, ಮೀಸಲು ಅರಣ್ಯವಾಗಿದೆ. ಆದರೂ, ಕೆರೆಗದ್ದೆಯಲ್ಲಿ 4 ಎಕರೆ ಕಂದಾಯ ಭೂಮಿ ಹುಡುಕಿ ಅದನ್ನು ನಿವೇಶನ ಲೇಔಟ್ ನ್ನು ನಿರ್ಮಿಸಲು ಗ್ರಾಮ ಪಂಚಾಯಿತಿಯವರು ಶ್ರಮ ಪಟ್ಟಿದ್ದಾರೆ. ಇದರಲ್ಲಿ 96 ನಿವೇಶನಗಳಿವೆ. ಇದರಲ್ಲಿ 14 ನಿವೇಶನವನ್ನು ಸರ್ಕಾರಿ ಬಳಕೆಗಾಗಿ ಕಾಯ್ದಿರಿಸಲಾಗಿದೆ. ಉಳಿದ ನಿವೇಶನದಲ್ಲಿ ಪ.ಜಾತಿ ಹಾಗೂ ವರ್ಗದವರಿಗೆ 24 ನಿವೇಶನ, ವಿಕಲಚೇತ ನರಿಗೆ 5 ನಿವೇಶನ, ಮಾಜಿ ಸೈನಿಕರಿಗೆ 1 ನಿವೇಶನ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 2 ನಿವೇಶನ ಮೀಸಲಿಡಬೇಕಾಗುತ್ತದೆ ಎಂದರು.ಉಳಿದ ನಿವೇಶನವನ್ನು ಸಾಮಾನ್ಯ ವರ್ಗದವರಿಗೆ ನೀಡಲಾಗುವುದು. 2023 ರಲ್ಲಿ ನಡೆದ ಗ್ರಾಮ ಸಭೆ ಯಲ್ಲಿ 21 ಅರ್ಹ ಫಲಾನುಭವಿಗಳನ್ನು ನಿವೇಶನಕ್ಕಾಗಿ ಆಯ್ಕೆ ಮಾಡಲಾಗಿತ್ತು. ಅದರಲ್ಲಿ 18 ಸಾಮಾನ್ಯ, 2 ಎಸ್.ಟಿ, ಎಸ್.ಟಿ 2 ನಿವೇಶನ, ಒಬ್ಬ ಹಿರಿಯ ನಾಗರಿಕರಿಗೆ 1 ನಿವೇಶನ ನೀಡಬೇಕು. ಉಳಿದ 28 ನಿವೇಶನ ವನ್ನು ಇಂದಿನ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ. ಗ್ರಾಮಸ್ಥರ ಆಕ್ಷೇಪಣೆ ಇದ್ದರೆ ತಿಳಿಸಬಹುದು. 108 ಜನ ಅರ್ಜಿ ಹಾಕಿದ್ದಾರೆ. ಆದರೆ 52 ಕುಟುಂಬದವರು ಸರಿಯಾದ ದಾಖಲೆ ನೀಡಿಲ್ಲ. ಕೆಲವರು ಮನೆ, ಜಮೀನು ಇದ್ದವರು, 94 ಸಿ ಅಡಿ ಮನೆ ಕಟ್ಟಿದವರು, ಜಮೀನಿನ ಒಳಗೆ ಸ್ವಂತ ಮನೆ ಇದ್ದವರು ಅರ್ಜಿ ಹಾಕಿದ್ದಾರೆ. ನಿವೇಶನ ರಹಿತರು, ಮನೆ ಇಲ್ಲವರಿಗೆ ಮೊದಲ ಆದ್ಯತೆ ನೀಡುತ್ತೇವೆ. ಗ್ರಾಮ ಪಂಚಾಯಿತಿಯವರು ಸಕಾರಾತ್ಮಕವಾಗಿ ತೀರ್ಮಾನ ತೆಗೆದು ಕೊಳ್ಳುತ್ತಾರೆ. ಬಿಪಿಎಲ್. ಕಾರ್ಡು ಹೊಂದಿದ ನಿವೇಶನ ರಹಿತರು ಅರ್ಜಿಯ ಜೊತೆ ರೇಷನ್ ಕಾರ್ಡು, ಜಾತಿ ಸರ್ಟಿಫಿಕೇಟ್, ಆದಾಯ ಪ್ರಮಾಣ ಪತ್ರ ನೀಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ನೋಡಲ್ ಅಧಿಕಾರಿ ಮನೀಶ್, ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಸುಜಾತಾ, ದಾಮಿನಿ, ಎಚ್.ಇ. ದಿವಾಕರ, ಎಸ್. ಉಪೇಂದ್ರ, ಎನ್.ಪಿ.ರಮೇಶ್, ಎಚ್.ಎಲ್.ವಿಜಯ, ಸಿದ್ದಪ್ಪಗೌಡ, ಪಿಡಿಒ ಶ್ರೀನಿವಾಸ್,ಕಾರ್ಯದರ್ಶಿ ನವೀನ್ ಕುಮಾರ್ ಇದ್ದರು.