ಜಿಲ್ಲೆಯಲ್ಲಿ 23 ಗ್ರಾಪಂ ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಸಿದ್ಧತೆ

KannadaprabhaNewsNetwork |  
Published : Jan 09, 2024, 02:00 AM IST
1.ಸಂಸದ ಡಿ.ಕೆ.ಸುರೇಶ್ ಖಾಸಗಿ ಕಂಪನಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಮುಂದಿನ 5 ವರ್ಷದೊಳಗೆ ಜಿಲ್ಲೆಯಲ್ಲಿ 80 ಗ್ರಾಪಂ ಪಬ್ಲಿಕ್ ಶಾಲೆ (ಜಿಪಿಪಿಎಸ್) ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದರಲ್ಲಿ ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಿರುವ 23 ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ

5 ವರ್ಷದೊಳಗೆ 80 ಜಿಪಿಪಿಎಸ್ ಗಳ ಸ್ಥಾಪನೆಗೆ ನಿರ್ಧಾರ । ಪ್ರತಿಯೊಂದು ಶಾಲೆ 6 -8 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ । ಖಾಸಗಿ ಕಂಪನಿಗಳ ಸಿಎಸ್ ಆರ್ ಅನುದಾನ ಬಳಕೆ

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಮುಂದಿನ 5 ವರ್ಷದೊಳಗೆ ಜಿಲ್ಲೆಯಲ್ಲಿ 80 ಗ್ರಾಪಂ ಪಬ್ಲಿಕ್ ಶಾಲೆ (ಜಿಪಿಪಿಎಸ್) ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದರಲ್ಲಿ ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಿರುವ 23 ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 23 ಸರ್ಕಾರಿ ಶಾಲೆಗಳನ್ನು ಗ್ರಾಪಂ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಚನ್ನಪಟ್ಟಣ ಕ್ಷೇತ್ರ - 03, ಕನಕಪುರ ಕ್ಷೇತ್ರ - 08, ಮಾಗಡಿ ಕ್ಷೇತ್ರ - 05 ಹಾಗೂ ರಾಮನಗರ ಕ್ಷೇತ್ರ ವ್ಯಾಪ್ತಿಯಲ್ಲಿ 5 ಶಾಲೆಗಳನ್ನು ಗುರುತಿಸಲಾಗಿದ್ದು, ಇನ್ನುಳಿದ 2 ಶಾಲೆಗಳ ಆಯ್ಕೆ ಪ್ರಕ್ರಿಯೆ ಮುಂದುವರೆದಿದೆ.

ಕಾರ್ಪೋರೇಟ್ ಸೆಕ್ಟರ್ ಗಳು ಹಾಗೂ ಖಾಸಗಿ ಕಾರ್ಖಾನೆಗಳ ಸಿಎಸ್ ಆರ್ ಅನುದಾನದಲ್ಲಿ ಉದ್ದೇಶಿತ ಸರ್ಕಾರಿ ಶಾಲೆಗಳನ್ನು ಗ್ರಾಪಂ ಪಬ್ಲಿಕ್

ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಿ ಹೈಟೆಕ್ ಸ್ಪರ್ಶ ನೀಡಲಿವೆ. ಪ್ರತಿಯೊಂದು ಶಾಲೆಯೂ 6-8 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈಗಾಗಲೇ ಜಿಪಿಪಿಎಸ್ ಶಾಲೆ ನಿರ್ಮಾಣವಾಗಲಿರುವ ಗ್ರಾಮಗಳ ನಕ್ಷೆ, ಜಾಗದ ಸರ್ವೇ ನಕ್ಷೆ, ಪಹಣಿ, ಶಾಲೆಗೆ ಅಗತ್ಯವಿರುವ ಸೌಲಭ್ಯಗಳ ವಿವರವನ್ನು ಕಲೆ ಹಾಕಿ ಸಂಪೂರ್ಣ ಯೋಜನೆಯನ್ನು ತಯಾರಿಸಲಾಗಿದೆ. ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಂಸದ ಡಿ.ಕೆ.ಸುರೇಶ್ ರವರು ಖಾಸಗಿ ಕಂಪನಿಗಳ ಅಧಿಕಾರಿಗಳು, ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ರೂಪ ನೀಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಈಗ ಸರ್ಕಾರಿ ಶಾಲೆಗಳಲ್ಲಿ ಸಂಪನ್ಮೂಲ, ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆ, ವಿಷಯವಾರು ಶಿಕ್ಷಕರ ಅಲಭ್ಯತೆ, ಸಮರ್ಪಕ ಬೋಧನಾ ತರಗತಿ ಕೊಠಡಿಗಳು ಇಲ್ಲ. ವಿವಿಧ ವಿಷಯಗಳ ಪ್ರಯೋಗಾಲಯಗಳು, ಸುಸಜ್ಜಿತ ಗ್ರಂಥಾಲಯ ಹೊಂದಿಲ್ಲ. ಆಟದ ಮೈದಾನ ಮತ್ತು ಕ್ರೀಡಾ ಸಾಮಗ್ರಿಗಳು ಲಭ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಿರುವ ಜೊತೆಗೆ ಮಕ್ಕಳು - ಪೋಷಕರು ಬಯಸುವ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಿಗುತ್ತಿಲ್ಲ.

ಗ್ರಾಪಂ ಪಬ್ಲಿಕ್ ಶಾಲೆ ಸ್ಥಾಪನೆಯ ಉದ್ದೇಶವೇನು?

ಈ ಎಲ್ಲ ಸಮಸ್ಯೆ - ತೊಡಕುಗಳನ್ನು ಗ್ರಾಪಂ ಪಬ್ಲಿಕ್ ಶಾಲೆಗಳ ಸ್ಥಾಪನೆಯಿಂದ ಪರಿಹರಿಸಿಕೊಳ್ಳಬಹುದಾಗಿದೆ. ಅಂದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಆ ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಶಿಕ್ಷಣ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮುಖ್ಯತೆ, ಶಿಕ್ಷಣ ವಂಚಿತ ಮಕ್ಕಳ ಸಂಖ್ಯೆಯನ್ನು ಶೂನ್ಯಗೊಳಿಸುವುದು. ಅಲ್ಲದೆ, ಶಿಕ್ಷಕರ ಕೊರತೆಯಿರುವ ಸರ್ಕಾರಿ ಶಾಲೆಗಳನ್ನು ಗ್ರಾಪಂ ಪಬ್ಲಿಕ್ ಶಾಲೆಗೆ ವಿಲೀನಗೊಳಿಸುವುದಾಗಿದೆ.ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವ ಶಾಲೆಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹರಿಸಲಾಗದ ಶಾಲೆಗಳನ್ನು ಜಿಪಿಪಿಎಸ್ ನೊಂದಿಗೆ ವಿಲೀನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಬಸವರಾಜೇಗೌಡ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

-------------

ಬಾಕ್ಸ್ .......

ಗ್ರಾಪಂ ಪಬ್ಲಿಕ್ ಶಾಲೆಯಲ್ಲಿ ಏನೆಲ್ಲ ಸೌಕರ್ಯ ಇರಲಿವೆ?

ಗ್ರಾಪಂ ಕೇಂದ್ರ ಸ್ಥಾನದಲ್ಲಿ 3 ರಿಂದ 6 ಎಕರೆ ಜಾಗದಲ್ಲಿ ಗ್ರಾಪಂ ಪಬ್ಲಿಕ್ ಶಾಲೆ ನಿರ್ಮಾಣಗೊಳ್ಳಲಿದೆ. ಅದರಲ್ಲಿ ಆಡಳಿತ ವಿಭಾಗ, ಶೈಕ್ಷಣಿಕ ವಿಭಾಗ, ಸ್ಮಾರ್ಟ್ ಕ್ಲಾಸ್ , ಭೋಜನಾಲಯ, ಪ್ರಯೋಗಾಲಯ, ಗ್ರಂಥಾಲಯ, ಚಟುವಟಿಕಾ ಕೇಂದ್ರ, ಆಟದ ಮೈದಾನ (ಖೋಖೋ, ಕಬಡ್ಡಿ, ವಾಲಿ ಬಾಲ್ , ಟೆನ್ನಿಸ್ , ರನ್ನಿಂಗ್ ಟ್ರ್ಯಾಕ್ , ಬ್ಯಾಸ್ಕೆಟ್ ಬಾಲ್ ಕೋರ್ಟ್), ಈಜುಕೊಳ, ಕ್ರೀಡಾ ವಿಭಾಗ, ಸಲಹಾ ಕೇಂದ್ರ, ಆರೋಗ್ಯ ತಪಾಸಣಾ ಕೇಂದ್ರ, ಭಾಷಾ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪೀಠೋಪಕರಣ, ಮಕ್ಕಳಿಗಾಗಿ ಶಾಲಾ ವಾಹನ, ವಿಷಯವಾರು ಶಿಕ್ಷಕರು, ಶಾಲಾ ಕೈತೋಟ, ಶುದ್ಧ ಕೂಡಿಯುವ ನೀರು, ಸುಸಜ್ಜಿತ ಅಡುಗೆ ಕೋಣೆ, ಹೈಟೆಕ್ ಶೌಚಾಲಯಗಳು, ಸೆಕ್ಯುರಿಟಿ ಗಾರ್ಡ್ ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲು ಇರಲಿದೆ.

-----------------

ಬಾಕ್ಸ್ ...

ಗ್ರಾಪಂ ಪಬ್ಲಿಕ್ ಶಾಲೆಗಳ ಪಟ್ಟಿ ?

ಚನ್ನಪಟ್ಟಣ ಕ್ಷೇತ್ರ - ಜೆ.ಬ್ಯಾಡರಹಳ್ಳಿ, ಹಾರೋಕೊಪ್ಪ , ಮಾಕಳಿ ಸರ್ಕಾರಿ ಪ್ರೌಢಶಾಲೆ

ಕನಕಪುರ ಕ್ಷೇತ್ರ - ಕೊಳಗೊಂಡನಹಳ್ಳಿ, ಉಯ್ಯಂಬಳ್ಳಿ (ಹೆಗ್ಗನೂರು), ಬಿಜ್ಜಹಳ್ಳಿ, ಚಿಕ್ಕಮುದುವಾಡಿ, ಐ.ಗೊಲ್ಲಹಳ್ಳಿ (ಮರಿಗೌಡನದೊಡ್ಡಿ - ಕೋಟೆ ಕೊಪ್ಪ), ಹೊಸದುರ್ಗ, ಹೊನ್ನಿಗನಹಳ್ಳಿ (ಕೆಮ್ಮಾಳೆ), ದಾಳಿಂಬ ಸರ್ಕಾರಿ ಪ್ರೌಢಶಾಲೆ. ರಾಮನಗರ ಕ್ಷೇತ್ರ - ಚೀಲೂರು, ಬನವಾಸಿ, ಬನ್ನಿಕುಪ್ಪೆ ಸರ್ಕಾರಿ ಪ್ರೌಢಶಾಲೆ, ಪಾದರಹಳ್ಳಿ, ಅವ್ವೇರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ.

ಮಾಗಡಿ ಕ್ಷೇತ್ರ - ಸಂಕೀಘಟ್ಟ, ಶ್ರೀಗಿರಿಪುರ, ಎಂ.ಗೋಪಹಳ್ಳಿ ಸರ್ಕಾರಿ ಪ್ರೌಢಶಾಲೆ, ಕುದೂರು ಕೆಪಿಎಸ್ , ಜಾಲಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ.

------------

ಬಾಕ್ಸ್ ......

ಯಾವ ಕಂಪನಿಯಿಂದ ಎಷ್ಟು ಶಾಲೆಗಳ ಅಭಿವೃದ್ಧಿ?

ಬೆಂಗಳೂರು ಉಪ್ಕೃತಿ ಸ್ವಯಂ ಸೇವಾ ಸಂಸ್ಥೆ - 03, ಬೆಂಗಳೂರು ನ್ಯಾಷನಲ್ ಎಜುಕೇಷನ್ ಫೌಂಡೇಷನ್ - 02, ಬೆಂಗಳೂರು ಪ್ರೆಸ್ಟೀಜ್ - 02, ಬೆಂಗಳೂರು ಓಸಾಟ ಕಂಪನಿ - 01, ಬಿಡದಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ - 04, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ -01, ಬಿಡದಿ ಕೇಟಲರ್ ಇಂಡಿಯಾ ಆಟೋ ಪಾರ್ಟ್ಸ್ - 01, ಹಿಂದುಸ್ಥಾನ್ ಕೋಕೋ ಕೋಲಾ -01, ಹಾರೋಹಳ್ಳಿ ಸ್ಟವ್ ಕ್ರಾಫ್ಟ್ ಪ್ರೈವೇಟ್ ಲಿಮಿಟೆಡ್ - 01, ಹಾರೋಹಳ್ಳಿ ಅಂಥಮ್ ಕಂಪನಿ - 01, ಸೆಂಟ್ ಗೋಬಿನ್ - 01, ಹಾರೋಹಳ್ಳಿ ಆರ್ಕಿಡ್ ಲ್ಯಾಮಿನೇಷನ್ ಲಿಮಿಟೆಡ್ - 01 ಶಾಲೆಯನ್ನು ಅಭಿವೃದ್ಧಿಪಡಿಸಲಿದೆ.

-----------

ಕೋಟ್ ......

ರಾಮನಗರ ಜಿಲ್ಲೆಯಲ್ಲಿ ಈ ವರ್ಷ 23 ಸರ್ಕಾರಿ ಶಾಲೆಗಳನ್ನು ಗ್ರಾಪಂ ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಂಸದ ಡಿ.ಕೆ.ಸುರೇಶ್ ರವರು ಖಾಸಗಿ ಕಂಪನಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ಯೋಜನೆ ಜಾರಿಗೆ ಮಾರ್ಗದರ್ಶನ ಮಾಡಿದ್ದಾರೆ. ಈಗ 23ರ ಪೈಕಿ 21 ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಖಾಸಗಿ ಕಂಪನಿಗಳು ಮುಂದೆ ಬಂದಿವೆ.

- ದಿಗ್ವಿಜಯ್ ಬೋಡ್ಕೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ, ರಾಮನಗರ.

------------------------------

8ಕೆಆರ್ ಎಂಎನ್ 1,2.ಜೆಪಿಜಿ

1.ಸಂಸದ ಡಿ.ಕೆ.ಸುರೇಶ್ ಖಾಸಗಿ ಕಂಪನಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

2. ದಿಗ್ವಿಜಯ್ ಬೋಡ್ಕೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ, ರಾಮನಗರ.

----------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ