- ಶಾಸಕ ಇಕ್ಬಾಲ್ ಹುಸೇನ್ ವೈಯಕ್ತಿಕ ಖರ್ಚಿನಲ್ಲೇ ಲಾಡು ಹಂಚಿಕೆ - 100ಕ್ಕೂ ಹೆಚ್ಚು ಬಾಣಸಿಗರಿಂದ ತಯಾರಿ
- ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೂ ಸಿಹಿ ವಿತರಣೆಕನ್ನಡಪ್ರಭ ವಾರ್ತೆ ರಾಮನಗರ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 15ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ವಿತರಿಸಲು ಸುಮಾರು 3 ಲಕ್ಷಕ್ಕೂ ಹೆಚ್ಚಿನ ಲಾಡುಗಳನ್ನು ತಯಾರಿಸುವ ಕಾರ್ಯ ನಡೆದಿದೆ.ಪ್ರತಿ ವರ್ಷದಂತೆ ಈ ವರ್ಷವೂ ಸಹ 78ನೇ ಸ್ವಾತಂತ್ರ್ಯೋತ್ಸವದ ದಿನದಂದು ರಾಮನಗರ ಕ್ಷೇತ್ರದ ಶಾಸಕ ಎಚ್.ಎ.ಇಕ್ಬಾಲ್‌ಹುಸೇನ್ ಅವರ ವೈಯಕ್ತಿಕ ಖರ್ಚಿನಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ ಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳ ಅಧಿಕಾರಿ, ಸಿಬ್ಬಂದಿಗೆ ಸಿಹಿ (ಲಾಡು) ವಿತರಣೆ ಮಾಡಲು ಭರದಿಂದ ಸಿದ್ದತೆಗಳು ಸಾಗಿದೆ.
ಕಳೆದ ಮೂರು ದಿನಗಳಿಂದ ನಗರದ ರಾಯರದೊಡ್ಡಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ 100ಕ್ಕೂ ಹೆಚ್ಚು ನುರಿತ ಬಾಣಸಿಗರು ಲಾಡುಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆಗಸ್ಟ್ 15ರಂದೇ ಶಾಲಾ - ಕಾಲೇಜು, ಸರ್ಕಾರಿ ಕಚೇರಿಗಳಿಗೆ ಲಾಡುಗಳು ಪೂರೈಕೆಯಾಗಲಿವೆ.ದೇಶಭಕ್ತಿಯ ಪ್ರತೀಕವಾದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕನಕಪುರ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವ ಕಾರ್ಯಕ್ರಮವನ್ನು ಇಕ್ಬಾಲ್ ಹುಸೇನ್ ಸ್ವಂತ ಖರ್ಚಿನಲ್ಲಿ ಆಯೋಜಿಸುತ್ತಾ ಬಂದಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ನಂತರ ಈ ಕಾರ್ಯಕ್ರಮವನ್ನು ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಿದರು.
ಜಿಲ್ಲೆಯ ಪ್ರತಿ ಶಾಲೆಯ ಪ್ರತಿ ಮಗುವೂ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಸಂತಸದಿಂದ ಇರಬೇಕು. ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಿಕರು ಮಾಡಿದ ಬಲಿದಾನ ಇಂದಿನ ವಿದ್ಯಾರ್ಥಿಗಳಿಗೆ ತಿಳಿಯಬೇಕು. ಭವ್ಯ ಭಾರತದಲ್ಲಿ ದೇಶಭಕ್ತಿ, ದೇಶಪ್ರೇಮ ಎತ್ತಿ ಹಿಡಿಯುವ ಉದ್ದೇಶದಿಂದ ಇಕ್ಬಾಲ್ ಹುಸೇನ್ ಪ್ರತಿವರ್ಷ ಸಿಹಿ ವಿತರಿಸುತ್ತಾ ಬಂದಿದ್ದಾರೆ.ಈ ಮೊದಲು ಸರ್ಕಾರಿ - ಖಾಸಗಿ ಶಾಲಾ ಕಾಲೇಜು ಮಕ್ಕಳಿಗೆ ಮಾತ್ರ ಲಾಡುಗಳನ್ನು ವಿತರಿಸಲಾಗುತ್ತಿತ್ತು. ಕಳೆದ ವರ್ಷದಿಂದ ಸರ್ಕಾರಿ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೂ ವಿತರಣೆ ಮಾಡಲಾಗುತ್ತಿದೆ.
ಆಗಸ್ಟ್ 15 ಭಾರತೀಯರಿಗೆ ಅತ್ಯಂತ ಸಂಭ್ರಮದ ದಿನ. ಮಕ್ಕಳಿಗೆ ಅಂದು ಲಾಡುಗಳನ್ನು ವಿತರಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ಆಯಾಯ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು, ವೀಕ್ಷಕರು ಹಾಗೂ ಅತಿಥಿಗಳಿಗಾಗಿ ಲಾಡುಗಳನ್ನು ವಿತರಣೆ ಮಾಡಲಾಗುವುದು.ನೋಡೆಲ್ ಅಧಿಕಾರಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಆಯಾಯ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಡಿಪಿಓಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಿಹಿ ತುಂಬಿದ ಬಾಕ್ಸ್‌ಗಳನ್ನು ಪಡೆದು ಸಮರ್ಪಕ ವಿತರಣೆಗೆ ಕ್ರಮ ವಹಿಸಲಿದ್ದಾರೆ. ಅವರ ಸಹಕಾರದಿಂದಲೇ ಪ್ರತಿವರ್ಷ ಸಿಹಿ ವಿತರಣೆ ಕಾರ್ಯಕ್ರಮ ಯಶಸ್ಸು ಕಾಣುತ್ತಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದರು.
14ರಂದೇ ಎಲ್ಲಡೆಗೂ ಪೂರೈಕೆಜಿಲ್ಲೆಯ ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ಹಾರೋಹಳ್ಳಿ ತಾಲೂಕುಗಳ ಎಲ್ಲ ಅಂಗನವಾಡಿ ಕೇಂದ್ರಗಳು, ಸರ್ಕಾರಿ/ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ, ಡಿಇಡಿ, ಬಿಎಡ್ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗೆ ಆಯಾಯ ವಿಭಾಗಗಳ ಮುಖ್ಯಸ್ಥರ ಮೂಲಕ ಸಿಹಿ ತುಂಬಿದ ಬಾಕ್ಸ್‌ಗಳನ್ನು ಪೂರೈಸಲಾಗುವುದು. ಪ್ರಾಥಮಿಕ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬಿಇಓಗಳು ಕ್ಲಸ್ಟರ್ ಹಂತದಲ್ಲಿ ಸುಗಮವಾಗಿ ಸಿಹಿ ವಿತರಣೆ ಮಾಡಲು ಮಕ್ಕಳ ಪಟ್ಟಿ ಸಿದ್ದತೆ ಮಾಡಿಕೊಂಡಿದ್ದು, ಆ.14ರಂದು ಬೆಳಿಗ್ಗೆ ರಾಮನಗರದಿಂದ ಎಲ್ಲ ತಾಲೂಕುಗಳಿಗೆ ಸಿಹಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ನಮ್ಮ ಹೆಮ್ಮೆಯ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲರಿಗೂ ಸಿಹಿ ವಿತರಿಸುವುದು ನನಗೆ ಬಹಳ ಇಷ್ಟವಾದ ಕಾರ್ಯಕ್ರಮ. ಜೊತೆಗೆ ನನಗೆ ಸಿಕ್ಕ ಸೌಭಾಗ್ಯವಾಗಿದೆ. ರಾಮನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಆರಂಭಿಸಿದ ಸಿಹಿ ವಿತರಣೆ ಕಾರ್ಯಕ್ರಮ ಇದಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ಪ್ರತಿವರ್ಷ ಸಿಹಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗಿದೆ. ಈ ವರ್ಷವೂ ಸಹ ಸುಮಾರು 3 ಲಕ್ಷಕ್ಕೂ ಹೆಚ್ಚು ಲಾಡುಗಳನ್ನು ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸರ್ಕಾರ ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ವಿತರಿಸಲಾಗುತ್ತಿದೆ.
-ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು. ರಾಮನಗರ ಕ್ಷೇತ್ರ