ಕನ್ನಡಪ್ರಭ ವಾರ್ತೆ ಆಳಂದ
ಈಗಾಗಲೇ ತಾಲೂಕಿನ ಶಾಲೆಗಳಿಗೆ ದಾಸ್ತಾನು ಕೈಗೊಂಡಿದ್ದ ಮಕ್ಕಳ ಸಮವಸ್ತ್ರಗಳನ್ನು ಆಯಾ ಶಾಲೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣಾ ನೋಡಲಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ.
ಒಟ್ಟು ಶಾಲೆಗಳಲ್ಲಿನ ಮಕ್ಕಳ ಬೇಡಿಕೆ ಪಠ್ಯಪುಸ್ತಕ ಅರ್ಧದಷ್ಟು ದಾಸ್ತಾನು ಕೇಂದ್ರದಲ್ಲಿ ದಾಸ್ತಾನಾಗಿದ್ದು, ಇನ್ನೂ ವಿಷಯವಾರು ಮತ್ತು ತರಗತಿವಾರು ಪುಸ್ತಕಗಳ ದಾಸ್ತಾನು ಕೇಂದ್ರಕ್ಕೆ ಬಂದಮೇಲೆ ಶಾಲೆಗಳಿಗೆ ವಿತರಣೆಗೆ ಚಾಲನೆ ದೊರೆಯಲಿದೆ.ಒಟ್ಟು ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ೯೪, ಹಿರಿಯ ಪ್ರಾಥಮಿ ಶಾಲೆ ೧೬೬, ಸರ್ಕಾರಿ ಪ್ರೌಢಶಾಲೆಗಳು ೪೮, ಅನುದಾನಿತ ಪ್ರಾಥಮಿಕ ಶಾಲೆ ೧೯, ಅನುದಾನಿತ ಪ್ರೌಢ ೧೧ ಶಾಲೆಗಳು ಹಾಗೂ ಅನುದಾನ ರಹಿತ ಕಿರಿಯ ಪ್ರಾಥಮಿಕ ಶಾಲೆ ೩೪, ಹಿರಿಯ ಪ್ರಾಥಮಿಕ ಶಾಲೆ ೫೬ ಶಾಲೆಗಳಿದ್ದು ಖಾಸಗಿ ಅನುದಾನ ರಹಿತ ೧೩೦ ಶಾಲೆಗಳಿವೆ. ಅಲ್ಲದೆ ಇದಕ್ಕೆ ಹೊರತಾಗಿಯೂ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ಕಿರಿಯ ಪ್ರಾಥಮಿಕ ಶಾಲೆ ೧, ಹಿರಿಯ ಪ್ರಾಥಮಿಕ ಶಾಲೆ ೧, ಪ್ರೌಢಶಾಲೆಗಳ ೬, ಹೀಗೆ ಒಟ್ಟು ೮ ಶಾಲೆಗಳು ಒಳಗೊಂಡು ಸರ್ಕಾರಿ ಮತ್ತು ಖಾಸಗಿ ಅನುದಾನಿತ ಅನುದಾನ ರಹಿತ ಮತ್ತು ಸಮಾಜ ಕಲ್ಯಾಣ ಅಡಿಯಲ್ಲಿನ ಒಟ್ಟು ಶಾಲೆಗಳ ಸಂಖ್ಯೆ ೪೭೦ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಗೆ ಅಂತಿಮ ಸಿದ್ಧತೆ ನಡೆದಿದೆ.