ಕನ್ನಡಪ್ರಭ ವಾರ್ತೆ ಬೆಂಗಳೂರು
ಲಾಲ್‌ಬಾಗ್ ಬಟಾನಿಕಲ್ ಉದ್ಯಾನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.18ರಿಂದ 28ರವರೆಗೆ ‘ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ’ 215ನೇ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ। ಶಮ್ಲಾ ಇಕ್ಬಾಲ್ ಅವರು, ಪ್ರದರ್ಶನದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಾಲ್ಕು ಪ್ರಮುಖ ದ್ವಾರಗಳು ಮತ್ತು ಗಾಜಿನ ಮನೆಯ ಪ್ರವೇಶ ದ್ವಾರಗಳಲ್ಲಿ ಡೋರ್‌ಫ್ರೇಮ್ ಮೆಟಲ್ ಡಿಕೆಕ್ಟರ್ಸ್ ಅಳವಡಿಸಲಾಗುವುದು. ದ್ವಾರಗಳು, ಗಾಜಿನಮನೆ ಮತ್ತು ಪ್ರಮುಖ ಪ್ರದೇಶಗಳಲ್ಲಿ ಹ್ಯಾಂಡ್‌ಹೆಲ್ಡ್ ಮೆಷಿನ್ಸ್ ಮೂಲಕ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುವುದು.
ಉದ್ಯಾನದ ಎಲ್ಲೆಡೆ 136 ಸಿಸಿ ಕ್ಯಾಮೆರಾ ಅಳವಡಿಸಿದ್ದು ಕಣ್ಗಾವಲು ಇಡಲಾಗುವುದು. ಅವಶ್ಯಕತೆಗೆ ಅನುಗುಣವಾಗಿ ಪೊಲೀಸರು, ಗೃಹರಕ್ಷಕರು, ಭದ್ರತಾ ಸಿಬ್ಬಂದಿ, ಸ್ವಯಂಸೇವಕರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ಅಗ್ನಿಶಾಮಕ ದಳದ ವಾಹನ, 38 ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆಯ್ದ ಪ್ರದೇಶಗಳಲ್ಲಿ ಪ್ಯಾರಾ ಮೆಡಿಕಲ್ ತಂಡವುಳ್ಳ ಮಿನಿ ಆಸ್ಪತ್ರೆ, ಹಾವು, ಜೇನುನೋಣ, ನಾಯಿಗಳ ಕಚ್ಚುವಿಕೆಗೆ ಸಂಬಂಧಿಸಿದ ಚುಚ್ಚುಮದ್ದು ಇರಿಸಲಾಗಿದೆ. ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕುಡಿಯುವ ನೀರಿನ ವ್ಯವಸ್ಥೆ: ಉದ್ಯಾನದಲ್ಲಿ ಪ್ರಸ್ತುತ 10 ಕುಡಿಯುವ ನೀರಿನ ಘಟಕಗಳಿದ್ದು, ಪ್ರದರ್ಶನದ ಅವಧಿಯಲ್ಲಿ ಹೆಚ್ಚುವರಿಯಾಗಿ 8 ಸ್ಥಳಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿಯಾಗಿ 5 ಆಯ್ದ ಸ್ಥಳಗಳಲ್ಲಿ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹೊರಾಂಗಣದ ಆಕರ್ಷಣೆ: ಲಾಲ್‌ಬಾಗ್‌ನ ಆರು ಆಯ್ದ ಸ್ಥಳಗಳಲ್ಲಿ ಬಸವಾದಿ ಶರಣರ ದರ್ಶನ, ವಚನ ಸಾಹಿತ್ಯಕ್ಕೆ ಪೂರಕವಾದ ಸಚಿತ್ರ ಮಾಹಿತಿ ಒದಗಿಸಲು ಎಲ್‌ಇಡಿ ವ್ಯವಸ್ಥೆ ಮಾಡಲಾಗಿದೆ.
ಗಾಜಿನ ಮನೆಯ ಪ್ರವೇಶ ದ್ವಾರದ ಇಕ್ಕೆಲುಗಳಲ್ಲಿ ಬಸವಣ್ಣನವರು ಮತ್ತು ಅನುಭವ ಮಂಟಪದ ಆಕರ್ಷಕ ಚಿತ್ರಗಳನ್ನು ಬಿದಿರಿನ ಫ್ರೇಮ್‌ನಲ್ಲಿ ಅಳವಡಿಸಲಾಗಿದೆ. ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್ ತಿಳಿಸಿದರು. ಸೆಲ್ಫಿ ಪಾಯಿಂಟ್
ತಾಳೆಗರಿ ವಿನ್ಯಾಸದ ಮೇಲೆ ಬಸವಣ್ಣ ಮತ್ತು ಬಸವಾದಿ ಶರಣರ ಚಿತ್ರ ಹಾಗೂ ಆಯ್ದ ವಚನಗಳಿರುವ 10 ಸೆಲ್ಫಿ ಪಾಯಿಂಟ್‌ಗಳನ್ನು ಸಸ್ಯ ತೋಟದ ಸ್ಥಳಗಳಲ್ಲಿ ಅನಾವರಣಗೊಳಿಸಲಾಗಿದೆ. ನಾಲ್ಕು ಪ್ರಮುಖ ದ್ವಾರಗಳ ಬಳಿ ವರ್ಟಿಕಲ್ ಗಾರ್ಡನ್‌ನಿಂದ ರೂಪಿತವಾಗಿರುವ ಕಮಾನುಗಳು ಪ್ರಮುಖ ಆಕರ್ಷಣೆ.
ತೋಟಗಾರಿಕೆ ಆಸಕ್ತರು ಬೀಜ, ಗೊಬ್ಬರ, ಸಸಿಗಳು, ಸಲಕರಣೆ, ತಾಂತ್ರಿಕ ಮಾಹಿತಿ ಇತ್ಯಾದಿಯನ್ನು ಇಲ್ಲಿ ಪಡೆಯಬಹುದು.ಜಲಪಾತ ವೀಕ್ಷಣೆಗೆ ಸಮಯ ನಿಗದಿ
ಲಾಲ್‌ಬಾಗ್ ಕೆರೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ನಯಾಗಾರ ಮಾದರಿಯ ಚಿಕ್ಕ ಜಲಪಾತ ಮತ್ತೊಂದು ಆಕರ್ಷಣೆಯಾಗಿದೆ. ಜಲಪಾತದ ಚಾಲನಾ ಅವಧಿ ನಿಗದಿ ಮಾಡಲಾಗಿದ್ದು, ಬೆಳಗ್ಗೆ 7ರಿಂದ 7.20, 8ರಿಂದ 8.20, 11ರಿಂದ 11.20. ಮಧ್ಯಾಹ್ನ 12ರಿಂದ 12.20, 1ರಿಂದ 1.20, 2ರಿಂದ 2.20, 3ರಿಂದ 3.20, 4ರಿಂದ 4.20, 5ರಿಂದ 5.20 ಹಾಗೂ ಸಂಜೆ 6ರಿಂದ 6.20ರವರೆಗೆ ಮಾತ್ರ ಧುಮ್ಮಿಕ್ಕುವ ಜಲಧಾರೆ ವೀಕ್ಷಿಸಬಹುದು.ಪಾರ್ಕಿಂಗ್ ವ್ಯವಸ್ಥೆ
ವಾಹನದಲ್ಲಿ ಬರುವವರಿಗೆ ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಹಾಪ್‍ಕಾಮ್ಸ್ ಆವರಣ, ಹಾಗೂ ಜೆ.ಸಿ. ರಸ್ತೆಯಲ್ಲಿನ ಬಬಿಎಂಪಿ ಬಹುಮಹಡಿಯಲ್ಲಿ ಕಾರುಗಳನ್ನು ನಿಲ್ಲಿಸಬಹುದು.
ದ್ವಿಚಕ್ರ ವಾಹನಗಳಲ್ಲಿ ಬರುವವರು ಆಲ್‍ಅಮೀನ್ ಕಾಲೇಜು ಆವರಣದ ನಿಲ್ದಾಣ ಪ್ರದೇಶದಲ್ಲಿ ನಿಲ್ಲಿಸಿ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್ ತಿಳಿಸಿದರು.
ಶಾಲಾ ಮಕ್ಕಳಿಗೆ ಉಚಿತ: ಒಂದರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಸಮವಸ್ತ್ರ ಧರಿಸಿ ಬಂದರೆ, (ರಜಾ ದಿನಗಳನ್ನು ಹೊರತುಪಡಿಸಿ) ಉಚಿತ ಪ್ರವೇಶ ನೀಡಲಾಗುವುದು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.ಪ್ರವೇಶ ಶುಲ್ಕ ಎಷ್ಟು?
ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ₹80 ರಜಾ ದಿನಗಳಲ್ಲಿ ₹100, ಹಾಗೆಯೇ 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲೂ ₹30 ಪ್ರವೇಶ ಶುಲ್ಕವಿದೆ.
ಸಮಯ: ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 7ರವರೆಗೆ. (ವಾಯುವಿಹಾರಿಗಳಿಗೂ ಪ್ರದರ್ಶನ ವೀಕ್ಷಣೆಗೆ ಬೆಳಗ್ಗೆ 6ರಿಂದಲೇ ಟಿಕೆಟ್ ಪಡೆಯಲು ಅವಕಾಶವಿದೆ).