ಅಕ್ರಮ ಭೂ ಮಂಜೂರಾತಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ, ಪತ್ರಕರ್ತರೊಂದಿಗೆ ಸಂವಾದ
ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಜಂಟಿ ಸರ್ವೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಎಷ್ಟು ಪ್ರದೇಶ ಸರ್ವೆ ಆಗಬೇಕು, ಕಂದಾಯ ಮತ್ತು ಅರಣ್ಯ ಇಲಾಖೆಯಲ್ಲಿ ಎಷ್ಟು ಮಂದಿ ಸರ್ವೆಯರ್ ಇದ್ದಾರೆ. ಜಾಗದಲ್ಲಿ ಸರ್ವೆ ಮಾಡಬೇಕಾ, ಡ್ರೋಣ್ ಮೂಲಕ ಸರ್ವೆ ಮಾಡಬೇಕಾ, ಇದಕ್ಕಾಗಿ ಹೊರ ಜಿಲ್ಲೆಯಿಂದ ಸರ್ವೆಯರ್‌ಗಳನ್ನು ಕರೆಸಿಕೊಳ್ಳಬೇಕಾ, ಈ ಎಲ್ಲಾ ಆಯಾಮಗಳಲ್ಲಿ ಯೋಚಿಸಲಾಗುತ್ತಿದೆ ಎಂದರು.ಕಾಫಿ ಬೆಳೆಗಾರರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಕಂದಾಯ ಭೂಮಿಯನ್ನು ಅವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವುದು ಪರಿಶೀಲನೆಯ ಹಂತದಲ್ಲಿದೆ. ಇದಕ್ಕೂ ಮೊದಲು ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಶಾಲೆಗಳು, ಆಟದ ಮೈದಾನ, ಸಶ್ಮಾನಗಳಿಗೆ ಜಾಗ ಮೀಸಲಿಟ್ಟು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕಡೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಅನರ್ಹರಿಗೆ ಜಮೀನು ಮಂಜೂರು ಮಾಡಿರುವ ಪ್ರಕರಣಗಳ ತನಿಖೆ ಮುಕ್ತಾಯಗೊಂಡಿದೆ. ನಮ್ಮ ಕೈಗೆ ವರದಿ ಸಹ ಬಂದಿದೆ. ಸುಮಾರು 10 ಸಾವಿರ ಪ್ರಕರಣಗಳಿದ್ದು, ಅವುಗಳಿಗೆ ಸಂಬಂಧಿಸಿದಂತೆ ಮುಂದಿನ ಹಂತದಲ್ಲಿ ಯಾವ ರೀತಿಯ ಕ್ರಮ ಆಗಬೇಕೆಂಬುದು ತೀರ್ಮಾನ ಮಾಡಬೇಕಾಗಿದೆ ಎಂದರು.
ಕಾಡು ಪ್ರಾಣಿಗಳ ಉಪಟಳ ಮಲೆನಾಡಿನಲ್ಲಿ ಹೆಚ್ಚಳವಾಗಿದೆ. ಕೆಲವೆಡೆ ಜನರು ಕಾಡಿನಿಂದ ಹೊರಗೆ ಬರಲು ವಾಸಿಸಲು ಇಚ್ಚಿಸಿದ್ದಾರೆ. ಕುದುರೆಮುಖ ಮೀಸಲು ಅರಣ್ಯದೊಳಗೆ ವಾಸವಾಗಿರುವ ಜನರು ಅಲ್ಲಿಂದ ಹೊರ ಬರಲು ಉದ್ದೇಶಿಸಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ನೀಡಬೇಕಾಗಿದೆ. ಈ ಸಿದ್ಧತೆಯೂ ಕೂಡ ನಡೆಯುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟಿಸಿದರು.