ಹಸಿ - ಒಣ ಕಸ ಪ್ರತ್ಯೇಕ ಸಂಗ್ರಹಕ್ಕೆ ಸಿದ್ಧತೆ

KannadaprabhaNewsNetwork |  
Published : Aug 18, 2025, 12:00 AM IST
5.ಸಮುದಾಯ ಸಂಚಾಲಕರು ವಾರ್ಡುಗಳಲ್ಲಿ ಕಸ ವಿಂಗಡಣೆ ಕುರಿತು ಅರಿವು ಮೂಡಿಸುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರಸಭೆ ಇನ್ನು ಮುಂದೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರಸಭೆ ಇನ್ನು ಮುಂದೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಸ ಮುಕ್ತ ನಗರ ನಿರ್ಮಿಸಲು ಒಣ ಮತ್ತು ಹಸಿ ಕಸವನ್ನು ಡೋರ್‌ ಟು ಡೋರ್‌ ಮಾದರಿಯಲ್ಲಿ ಸಂಗ್ರಹಣೆ ಮಾಡಬೇಕು ಎಂದು 2016ರಲ್ಲೇ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ನಿಯಮ ಜಾರಿಗೊಳಿಸಿದೆ. ಆದರೆ, ಈವರೆಗೂ ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆಯಾಗುತ್ತಿಲ್ಲ.

ಈಗ ಮನೆ - ಮನೆ ಕಸ ಸಂಗ್ರಹಣೆ ಮೂಲದಲ್ಲಿಯೇ ಒಣ ಮತ್ತು ಹಸಿ ತ್ಯಾಜ್ಯ ವಿಂಗಡಣೆ ವ್ಯವಸ್ಥೆ ಜಾರಿಗೊಳಿಸಲು ಸಿದ್ಥತೆಗಳು ಭರದಿಂದ ಸಾಗಿದೆ. ಇದಕ್ಕಾಗಿ ನಾಗರೀಕರಲ್ಲಿ ಅರಿವು ಮೂಡಿಸಲು ಹಾಗೂ ತ್ಯಾಜ್ಯ ವಿಂಗಡಣೆ ಕಾರ್ಯ ಚಾಲ್ತಿಗೆ ತರುವ ಸಲುವಾಗಿ ರಾಮನಗರ ನಗರಸಭೆಗೆ 16 ಮಂದಿ ಸಮುದಾಯ ಸಂಚಾಲಕರನ್ನು ನಿಯೋಜನೆ ಮಾಡಲಾಗಿದೆ.

ಸಮುದಾಯ ಸಂಚಾಲಕರಾಗಿ ನೇಮಕಗೊಂಡಿರುವ 16 ಮಂದಿ ಸ್ವ ಸಹಾಯ ಗುಂಪುಗಳ ಸದಸ್ಯರನ್ನು ತಲಾ ನಾಲ್ಕು ಮಂದಿಯಂತೆ ನಾಲ್ಕು ತಂಡ ರಚಿಸಲಾಗಿದ್ದು, ಪ್ರತಿಯೊಂದು ತಂಡವೂ ನಾಲ್ಕು ವಾರ್ಡುಗಳಂತೆ ನಾಲ್ಕು ತಂಡಗಳು 31 ವಾರ್ಡುಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಚಟುವಟಿಕೆ ಪ್ರಾರಂಭಿಸಿದೆ.

ಈಗಾಗಲೇ ವಾರ್ಡುಗಳಿಗೆ ಭೇಟಿ ನೀಡಿರುವ ಸಮುದಾಯ ಸಂಚಾಲಕರ ತಂಡಗಳು ವಾರ್ಡಿನಲ್ಲಿರುವ ಮನೆಗಳು, ದಿನಸಿ ಅಂಗಡಿಗಳು, ಹೋಟೆಲ್ ಗಳು, ಕುರಿ, ಕೋಳಿ, ಮೀನಿನ ಅಂಗಡಿಗಳು, ನರ್ಸಿಂಗ್ ಹೋಮ್ ಗಳು, ಶಾಲಾ -ಕಾಲೇಜುಗಳು, ಕಚೇರಿಗಳು, ಧಾರ್ಮಿಕ ಸ್ಥಳಗಳು ಎಷ್ಟಿವೆ, ಅಲ್ಲಿಂದ ಎಷ್ಟು ಕಸ ಉತ್ಪತ್ತಿಯಾಗುತ್ತಿದೆ ಎಂಬುದರ ಕುರಿತಾಗಿ ಸರ್ವೆ ಮಾಡುತ್ತಿವೆ.

ಸಮುದಾಯ ಸಂಚಾಲಕರ ಕಾರ್ಯ ಚಟುವಟಿಕೆಗಳೇನು ?

ಪ್ರತಿಯೊಂದು ತಂಡದ ಸದಸ್ಯರು ತಮಗೆ ನಿಗದಿ ಪಡಿಸಿರುವ ವಾರ್ಡುಗಳಲ್ಲಿ ಪ್ರತಿ ದಿನ ಮನೆ ಮನೆಯಿಂದ ಕಸ ಸಂಗ್ರಹಿಸುವ ವಾಹನಗಳು ಕಸವನ್ನು ನಿಯಮಿತವಾಗಿ ಸಂಗ್ರಹಿಸುತ್ತಿದ್ದಾರೆಯೇ ಎಂದು ಮೇಲ್ವಿಚಾರಣೆ ಮಾಡುತ್ತಾರೆ. ಜೊತೆಗೆ ಪ್ರತಿ ಮನೆ ಮನೆಗೆ ತೆರಳಿ ಹಸಿ ಮತ್ತು ಒಣ ಕಸ ಹಾಗೂ ಗೃಹೋತ್ಪತ್ತಿ ಹಾನಿಕಾರ ಕಸವನ್ನು ಬೇರ್ಪಡಿಸಿ ನೀಡುವಂತೆ ನಾಗರೀಕರಲ್ಲಿ ಅರಿವು ಮೂಡಿಸಲಿದ್ದಾರೆ.

ಪ್ರತಿಯೊಂದು ತ್ಯಾಜ್ಯ ಉತ್ಪಾದಕರ ಮನೆ, ಅಂಗಡಿ ಇತರೆ ವಾಣಿಜ್ಯ ಘಟಕ, ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಎಷ್ಟು ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತಿದೆ ಎಂಬ ಮಾಹಿತಿಯನ್ನು ಕಲೆ ಹಾಕಲಿದೆ. ಅಲ್ಲದೆ, ಏಕ ಬಳಕೆಯ ಪ್ಲಾಸ್ಟಿಕ ನಿಷೇಧದ ಕುರಿತಾಗಿ ಜಾಗೃತಿ ಮೂಡಿಸಲಿದೆ. ಅಲ್ಲದೆ, ನಗರಸಭೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಗಳ ದಾಸ್ತಾನು - ಮಾರಾಟ ಅಂಗಡಿಗಳಿಗೆ ದಂಡ ವಿಧಿಸಲಿದ್ದಾರೆ.

ಪ್ರತಿಯೊಂದು ಶಾಲಾ ಕಾಲೇಜುಗಳಿಗೆ ಭೇಟಿ ನೀಡಲಿರುವ ಸಮುದಾಯ ಸಂಚಾಲಕರ ತಂಡವು ವಿದ್ಯಾರ್ಥಿಗಳಿಗೆ ಕಸ ಬೇರ್ಪಡಿಸುವಿಕೆಯ ಮಹತ್ವ, ವೈಯಕ್ತಿಕ, ಸ್ವಚ್ಛತೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಅರಿವು ಮೂಡಿಸಲಿದೆ. ಆ ಬಗ್ಗೆ ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಆಯೋಜನೆ ಮಾಡುತ್ತದೆ.

ಹೋಟೆಲ್, ರೆಸ್ಟೋರೆಂಟ್ ಇನ್ನಿತರ ತಿನಿಸುಗಳನ್ನು ಮಾರುವ ಬೀದಿ ವ್ಯಾಪಾರಸ್ಥರಲ್ಲೂ ಕಸ ಬೇರ್ಪಡಿಸುವ ಮತ್ತು ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದಂತೆ ಅರಿವು ಮೂಡಿಸುವರು.

ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಉದ್ಯಾನಗಳು, ಪ್ರಮುಖ ವೃತ್ತಗಳು, ಮಾರುಕಟ್ಟೆಗಳಲ್ಲಿ ನೈರ್ಮಲ್ಯ ಕಾಪಾಡುವ, ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಜೀವ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸೇವೆ ಒದಗಿಸುವವರ ಮೂಲಕ ವಿಲೇವಾರಿ ಮಾಡುವ, ಧಾರ್ಮಿಕ ಸ್ಥಳಗಳಾದ ದೇವಸ್ಥಾನಗಳು, ಮಸೀದಿ, ಚರ್ಚ್ ಗಳಲ್ಲಿ ಕಸ ಬೇರ್ಪಡಿಸುವಿಕೆ , ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಸಮುದಾಯ ಸಂಚಾಲಕರು ಜಾಗೃತಿ ಮೂಡಿಸಲಿದ್ದಾರೆ.

ಕೋಟ್ ................

ಪ್ರತಿ ದಿನ ರಾಮನಗರದಲ್ಲಿ 56 ಟನ್‌ಗೂ ಹೆಚ್ಚು ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಆ ಪೈಕಿ 55 ಟನ್‌ ಹಸಿ ಕಸದಿಂದ ಕೂಡಿದ್ದರೆ , 45 ಟನ್‌ ಒಣ ಕಸ. ಒಣ ಕಸದಲ್ಲಿ ಶೇ.5ರಷ್ಟು ಅಪಾಯಕಾರಿ ತ್ಯಾಜ್ಯಗಳೇ ಇರುತ್ತವೆ. ಹೀಗಾಗಿ ಸಾರ್ವಜನಿಕರು ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು. ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡುವುದನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಆ ಮೂಲಕ ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಕೈ ಜೋಡಿಸಬೇಕು.

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

ಕೋಟ್ ....................

ರಾಮನಗರದಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವಂತೆ ನಾಗರೀಕರಲ್ಲಿ ಅರಿವು ಮೂಡಿಸಿ, ಅದನ್ನು ಕಾರ್ಯಗತಗೊಳಿಸುವ ಸಲುವಾಗಿ ನಗರಸಭೆಗೆ ಸ್ವ ಸಹಾಯ ಗುಂಪುಗಳ 16 ಸದಸ್ಯರನ್ನು ಸಮುದಾಯ ಸಂಚಾಲಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ನಿಗಧಿತ ಮಾಸಿಕ ಗೌರವಧನ ಆಧಾರದ ಮೇಲೆ 3 ವರ್ಷಗಳ ಕಾಲ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ.

-ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.

ಕೋಟ್ .................

ಜಿಲ್ಲಾ ಕೇಂದ್ರ ರಾಮನಗರದಲ್ಲಿ 24 ಸಾವಿರ ಮನೆಗಳಿದ್ದು, ಎಲ್ಲ ಮನೆಗಳಿಂದಲೂ ಕಸ ಸಂಗ್ರಹ ಮಾಡಲಾಗುತ್ತಿದೆ. ಅಧ್ಯಕ್ಷರು ಮತ್ತು ಆಯುಕ್ತರೊಂದಿಗೆ ಚರ್ಚಿಸಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸುವ ಸಲುವಾಗಿ ಕಸ ಸಂಗ್ರಹಿಸುತ್ತಿರುವ ಆಟೋ ಟಿಪ್ಪರ್ ಗಳ ಮಧ್ಯೆ ಶೀಟ್ ಅಳವಡಿಸಲಾಗಿದೆ. ಶೀಘ್ರದಲ್ಲಿಯೇ ಮನೆಗಳಿಂದ ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡುವುದು ಕಡ್ಡಾಯವಾಗಲಿದೆ.

- ಸುಬ್ರಹ್ಮಣ್ಯ, ಎಇಇ, ಪರಿಸರ ವಿಭಾಗ, ನಗರಸಭೆ, ರಾಮನಗರ.

17ಕೆಆರ್ ಎಂಎನ್ 5,6,7,8.ಜೆಪಿಜಿ

5.ಸಮುದಾಯ ಸಂಚಾಲಕರು ವಾರ್ಡುಗಳಲ್ಲಿ ಕಸ ವಿಂಗಡಣೆ ಕುರಿತು ಅರಿವು ಮೂಡಿಸುತ್ತಿರುವುದು.

6.ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.

7.ಡಾ.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.

8.ಸುಬ್ರಹ್ಮಣ್ಯ, ಎಇಇ, ಪರಿಸರ ವಿಭಾಗ, ನಗರಸಭೆ, ರಾಮನಗರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ